Advertisement

ಪಾಲಿಕೆಯಿಂದ ಬಿಡಾಡಿ ದನಗಳ ಸ್ಥಳಾಂತರ

03:05 PM Nov 08, 2019 | Naveen |

„ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಮಲಗಿ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಬಿಡಾಡಿ ದನಗಳನ್ನು ಬೇರೆಡೆ ಸಾಗಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು ಕಳೆದ ಮಂಗಳವಾರ ರಾತ್ರಿ 2 ವಾಹನಗಳಲ್ಲಿ 31 ದನಗಳನ್ನು ರಾಯಚೂರಿನ ಗೋಶಾಲೆಗೆ ಸಾಗಿಸುವ ಮೂಲಕ ದನಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

Advertisement

ಇಲ್ಲಿನ ಎಸ್‌.ಎನ್‌. ಪೇಟೆ ಮುಖ್ಯ ರಸ್ತೆ, ಬಸವೇಶ್ವರ ನಗರ, ಪಟೇಲ್‌ ನಗರ ಮುಖ್ಯ ರಸ್ತೆ, ರೈಲ್ವೆ ಮೇಲ್ಸೇತುವೆ, ಬೆಂಗಳೂರು ರಸ್ತೆ, ತೇರು ಬೀದಿ ಹೀಗೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಮಲಗುತ್ತಿದ್ದ ದನಗಳು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದವು. ಮೊದಲೇ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವುದೇ ಕಷ್ಟ ಸಾಧ್ಯ ಎನ್ನುತ್ತಿರುವ ಚಾಲಕರಿಗೆ ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ಮಲಗುತ್ತಿದ್ದ ಬಿಡಾಡಿ ದನಗಳು ಮತ್ತಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದವು.

ಬಿಡಾಡಿ ದನಗಳಿಗೆ ವಾಹನಗಳು ಡಿಕ್ಕಿ ಹೊಡೆದಿರುವುದು, ದನಗಳು ಜನರಿಗೆ ಇರಿದು ಗಾಯಗೊಳಿಸಿದ್ದ ಹಲವು ಉದಾಹರಣೆಗಳು ಇವೆ. ಇನ್ನು ಎಪಿಎಂಸಿಯಲ್ಲಿನ ತರಕಾರಿ ವ್ಯಾಪಾರಿಗಳಂತೂ ಬಿಡಾಡಿ ದನಗಳ ಕಾಟಕ್ಕೆ ಬೇಸತ್ತಿದ್ದಾರೆ. ನಗರದಲ್ಲಿ ಬಿಡಾಡಿ ದನಗಳಿಂದ ಇಷ್ಟೆಲ್ಲ ಅವಾಂತರಗಳು ನಡೆದರೂ ಕ್ರಮ ಕೈಗೊಳ್ಳದ ಪಾಲಿಕೆ ಅ ಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದು, ಈ ನಿಟ್ಟಿನಲ್ಲಿ ದನಗಳನ್ನು ತೆರವುಗೊಳಿಸಿ, ಸಂಬಂಧಪಟ್ಟ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಹಲವು ಸಂಘಟನೆಗಳು ಪಾಲಿಕೆಗೆ ಮನವಿ ಸಲ್ಲಿಸಿ ಒತ್ತಡ ಹೇರಿದ್ದವು. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಸೆಳೆದಿದ್ದು, ಸಚಿವರು ಸಹ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು.

ಪರಿಣಾಮ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೀಗ ದನಗಳ ತೆರವಿಗೆ ಮುಂದಾಗಿದ್ದಾರೆ. ಕಳೆದ ಮಂಗಳವಾರ ರಾತ್ರಿ ನಗರದ ವಿವಿಧ ರಸ್ತೆಗಳಲ್ಲಿನ ಒಟ್ಟು 31 ದನಗಳನ್ನು ಹಿಡಿದು ಎರಡು ವಾಹನಗಳಲ್ಲಿ ರಾಯಚೂರು ಗೋಶಾಲೆಗೆ ಕಳುಹಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಪಾಲಿಕೆಯರು ತಮ್ಮ ದನಕರುಗಳನ್ನು ರಸ್ತೆಗೆ ಬಿಡಬಾರದು. ಒಂದು ವೇಳೆ ಬಿಟ್ಟರೆ ಅವುಗಳನ್ನು ಬೇರೆಡೆ ಸಾಗಿಸುವುದಾಗಿ ಪಾಲಿಕೆ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚರಿಕೆ ವಹಿಸಿದ ಕೆಲವರು ದನಗಳನ್ನು ಮನೆಗಳಲ್ಲಿ ಕಟ್ಟಿಕೊಂಡರೆ, ಕೆಲವರು ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ ಮಂಗಳವಾರ ರಾತ್ರಿ ಎಸ್‌ಪಿ ಸಿ.ಕೆ.ಬಾಬಾ ಮಾರ್ಗದರ್ಶನದಲ್ಲಿ ಪಾಲಿಕೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಇಲ್ಲಿನ ಗಾಂಧಿ ನಗರ ಠಾಣೆಯ ಸಿಪಿಐ ಗಾಯತ್ರಿ, ಬ್ರೂಸ್‌ಪೇಟೆ ಠಾಣೆಯ ಸಿಪಿಐ ಕಾಳಿಕೃಷ್ಣ ನೇತೃತ್ವದ ತಂಡ 31 ದನಗಳನ್ನು ಹಿಡಿದು ನಿಪುಣರ ಸಹಕಾರದಿಂದ ಕ್ಯಾಂಟರ್‌ ವಾಹನಕ್ಕೆ ಹತ್ತಿಸಿ ರಾಯಚೂರು ಗೋಶಾಲೆಗೆ ರವಾನಿಸಲಾಯಿತು ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಹನುಮಂತಪ್ಪ ತಿಳಿಸಿದರು.

Advertisement

ಇದೇ ವೇಳೆ ಸ್ಥಳಕ್ಕೆ ಬಂದ ಕೆಲ ಮಾಲೀಕರು ಕ್ಷಮೆಯಾಚಿಸಿ ತಮ್ಮ ದನಕರುಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ. ಇಲ್ಲಿನ ಪಶುಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ ನಗರದಲ್ಲಿ 600 ರಿಂದ 800 ದನಗಳು ಇವೆ ಎನ್ನಲಾಗುತ್ತಿದೆ. ದನಗಳನ್ನು ಬೇರೆಡೆಗೆ ಸಾಗಿಸಲ್ಲ. ನಗರದಿಂದ ಹೊರವಲಯಕ್ಕೆ ಓಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಪಾಲಿಕೆ, ಪೊಲೀಸ್‌ ಇಲಾಖೆ ಕಾರ್ಯಾಚರಣೆಯಿಂದಾಗಿ ವಾಹನ ಸವಾರರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next