ಬಳ್ಳಾರಿ: ತುಂಗಭದ್ರಾ ಜಲಾಶಯ ನಿರ್ಮಾಣದಿಂದ ಸ್ಥಳಾಂತರಗೊಂಡಿದ್ದ ತಿಮ್ಮಲಾಪುರ ಗ್ರಾಮದಲ್ಲಿ ಅಂದು 25 ಕುಟುಂಬಗಳಿಗೆ ಹಂಚಿಕೆ ಮಾಡಲಾಗಿದ್ದ ನಿವೇಶನಗಳಲ್ಲೇ ಇಂದು ಸುಮಾರು 300 ಕುಟುಂಬಗಳು ವಾಸ ಮಾಡುತ್ತಿವೆ. ಕುಟುಂಬದ ಒಬ್ಬೊಬ್ಬರಿಗೆ ಕನಿಷ್ಠ 10 ಅಡಿ ಜಾಗ ಸಹ ಬರಲ್ಲ. ಗ್ರಾಮದ ಸುತ್ತಲೂ ಎಲ್ಲೂ ಸರ್ಕಾರಿ ಜಮೀನು ಇಲ್ಲ. ಗ್ರಾಮಸ್ಥರ ಪ್ರಮುಖ ಸಮಸ್ಯೆಯೇ ನಿವೇಶನ ಹಂಚಿಕೆ ಮಾಡಬೇಕು.
ಅವಿಭಜಿತ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿಯವರು ಫೆ. 20ರಂದು ವಾಸ್ತವ್ಯ ಹೂಡಲಿರುವ ಜಿಲ್ಲೆಯ ಹೊಸಪೇಟೆ ತಾಲೂಕು ಚಿಲಕನಹಟ್ಟಿ ಗ್ರಾಪಂ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದ ನಿವಾಸಿಗಳ ಅಳಲಿದು.
ತುಂಗಭದ್ರಾ ಜಲಾಶಯ ನಿರ್ಮಾಣದ ಹಿನ್ನೆಲೆಯಲ್ಲಿ 1955ರಲ್ಲಿ 25 ಕುಟುಂಬಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಅಂದು ಪ್ರತಿ ಕುಟುಂಬಕ್ಕೆ ಒಂದು ನಿವೇಶನ, ಐದು ಎಕರೆ ಕೃಷಿ ಜಮೀನನ್ನು ಸರ್ಕಾರದಿಂದ ವಿತರಿಸಲಾಗಿತ್ತು. ಆದರೆ ಇಂದು ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಾಗಿದ್ದು, 1500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅಂದು ಹಂಚಿಕೆ ಮಾಡಲಾಗಿದ್ದ ನಿವೇಶನಗಳಲ್ಲೇ ಜನರು ಸಣ್ಣ ಸಣ್ಣ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇಡೀ ಗ್ರಾಮಕ್ಕೆ ಸೇರಿ ಕೇವಲ 150 ಎಕರೆ ಕೃಷಿ ಜಮೀನು ಇದ್ದು, ಗ್ರಾಮದ ಇಂದಿನ ಜನಸಂಖ್ಯೆಗೆ ವಿಭಜಿಸಿದರೆ ಒಬ್ಬೊಬ್ಬರಿಗೆ ಒಂದೊಂದು ಎಕರೆಯೂ ಬರಲ್ಲ ಎಂದು ಗ್ರಾಮದ ನಿವಾಸಿ ಪ್ರಕಾಶ್ ಬೇಸರ ವ್ಯಕ್ತಪಡಿಸುತ್ತಾರೆ.
ಚಿಲಕನಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತಿಮ್ಮಲಾಪುರ ಗ್ರಾಮದಲ್ಲಿ ಕನಿಷ್ಠ ಒಂದೇ ಒಂದು ಎಕರೆ ಸರ್ಕಾರಿ ಜಮೀನು ಇಲ್ಲ. ಗ್ರಾಮದ ಮುಂದೆ ರಾಷ್ಟ್ರೀಯ ಹೆದ್ದಾರಿ 50 ಹಾದು ಹೋಗಿದ್ದರೆ, ಸುತ್ತಮುತ್ತಲೂ ಅರಣ್ಯ ಇಲಾಖೆಗೆ ಸೇರಿದ್ದ ಅರಣ್ಯ ಜಮೀನಿದೆ. ಅರಣ್ಯ ಇಲಾಖೆ ಜಮೀನು ಬಳಕೆಗೆ ಇಲಾಖೆ ಅಧಿ ಕಾರಿಗಳು ಬಿಡುತ್ತಿಲ್ಲ. ಗ್ರಾಮದಲ್ಲಿ ಶೇ. 80ರಷ್ಟು ಪರಿಶಿಷ್ಟ ಜಾತಿ, ಪಂಗಡದ ಜನರು, ಶೇ. 20ರಷ್ಟು ಇತರೆ ಸಮುದಾಯಗಳ ಜನರು ವಾಸಿಸುತ್ತಿದ್ದಾರೆ.
ದಶಕಗಳ ನಿವೇಶನ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿ ಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಪಂಗಳಲ್ಲಿ ಆಶ್ರಯ ಮನೆ ಮಂಜೂರಾಗಿದ್ದರೂ, ನಿರ್ಮಿಸಿಕೊಳ್ಳಲು ಜಾಗವೇ ಇಲ್ಲ. ಹಾಗಾಗಿ ಗ್ರಾಮಸ್ಥರಿಗೆ ನಿವೇಶನ ಹಂಚಿಕೆ ಮಾಡಬೇಕು. ಪ್ರತಿ ಕುಟುಂಬಕ್ಕೆ ಕನಿಷ್ಠ 2 ಎಕರೆ ಕೃಷಿ ಜಮೀನು ಮಂಜೂರು ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ದೇವಸ್ಥಾನ ಅಭಿವೃದ್ಧಿ: ತಿಮ್ಮಲಾಪುರ ಗ್ರಾಮದಲ್ಲಿ ವಿಜಯನಗರ ಕಾಲದ ಕೃಷ್ಣನ ದೇವಸ್ಥಾನವಿದೆ. ಪ್ರಾಚ್ಯವಸ್ತು ಪುರಾತತ್ವ ಇಲಾಖೆಗೆ ಸೇರಿದ್ದ ಈ ದೇವಸ್ಥಾನ ಅಭಿವೃದ್ಧಿ ಕಾಣದಾಗಿದೆ. ದೇವಸ್ಥಾನ ಅಭಿವೃದ್ಧಿ ಪಡಿಸುವುದರ ಜತೆಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇರುವುದರಿಂದ ಗ್ರಾಮದಲ್ಲಿ ಸದಾ ಅಂತರ್ಜಲ ದೊರೆಯಲಿದೆ. ಹೀಗಾಗಿ ಕುಡಿವ ನೀರಿಗೆ ಯಾವುದೇ ತೊಂದರೆ ಇಲ್ಲವೆಂದರೂ, ಫ್ಲೊರೈಡ್ ಅಂಶ ಹೆಚ್ಚಿದ್ದು, ಶುದ್ಧ ಕುಡಿವ ನೀರಿನ ಘಟಕವನ್ನು ಅಳವಡಿಸಲಾಗಿದೆ.
43 ಅರ್ಜಿ ಸ್ವೀಕಾರ: ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಫೆ. 20ರಂದು ಗ್ರಾಮವಾಸ್ತವ್ಯ ಹೂಡುವ ಹಿನ್ನೆಲೆಯಲ್ಲಿ ತಿಮ್ಮಲಾಪುರ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪಿಂಚಣಿ, ಖಾತೆ ಬದಲಾವಣೆ, ನಿವೇಶನ ಹಂಚಿಕೆ ಸೇರಿ ಒಟ್ಟು 43 ಅರ್ಜಿಗಳು ಸಲ್ಲಿಕೆಯಾಗಿವೆ. ಫೆ. 20ರಂದು ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಅಹವಾಲು ಸ್ವೀಕಾರ ನಡೆಯಲಿದ್ದು, ಕಂದಾಯ ನಿರೀಕ್ಷಕರು, ಗ್ರಾಪಂ ಪಿಡಿಒಗಳು ಸ್ಥಳದಲ್ಲೇ ಅರ್ಜಿ ಸ್ವೀಕರಿಸಲಿದ್ದಾರೆ.
ಪಿಂಚಣಿ ಸಮಸ್ಯೆಗಳನ್ನು ಫಲಾನುಭವಿಗಳು ಅರ್ಹರಿದ್ದಲ್ಲಿ ಸ್ಥಳದಲ್ಲೇ ಆದೇಶ ಪ್ರತಿ ವಿತರಿಸಲಾಗುತ್ತದೆ. ಜಿಲ್ಲಾ ಧಿಕಾರಿಗಳು ಅಂದು ಬೆಳಗ್ಗೆ ಗ್ರಾಮದಲ್ಲಿ ಸಂಚರಿಸಿ ಪರಿಶೀಲನೆ ನಡೆಸಲಿದ್ದಾರೆ. ಬೆ.10 ಗಂಟೆಯಿಂದ ಸಂಜೆ 5 ಗಂಟೆಯವರೆ ನಡೆಯಲಿದ್ದು, ಅಂದು ರಾತ್ರಿ ಜಿಲ್ಲಾಧಿಕಾರಿಗಳು ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಹೊಸಪೇಟೆ ಉಪ ವಿಭಾಗಾಧಿಕಾರಿ ಸಿದ್ದರಾಮೇಶ್ವರ ಹೇಳಿದರು.