ಬಳ್ಳಾರಿ: ನಗರದ ವಿಮ್ಸ್ ಆಸ್ಪತ್ರೆ ಕೋವಿಡ್ ವೈರಸ್ ಟೆಸ್ಟಿಂಗ್ ಲ್ಯಾಬ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಶುಕ್ರವಾರ ಮಧ್ಯಾಹ್ನದಿಂದ ಸ್ಯಾಂಪಲ್‌ಗಳ ಟೆಸ್ಟಿಂಗ್ ಕಾರ್ಯ ಸ್ಥಗಿತಗೊಂಡಿದೆ.
ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ವೈರಸ್ ಟೆಸ್ಟಿಂಗ್ ಲ್ಯಾಬ್‌ನ್ನು ಇತ್ತೀಚೆಗಷ್ಟೇ ತೆರೆಯಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿ ಮೂರು ಜಿಲ್ಲೆಗಳಿಗೂ ಅನುಕೂಲವಾಗುವ ಉದ್ದೇಶದಿಂದ ಕಳೆದ ಏ.16ರಿಂದ ಬಳ್ಳಾರಿಯಲ್ಲಿ ಟೆಸ್ಟಿಂಗ್ ಲ್ಯಾಬ್ ತೆರೆಯಲಾಗಿತ್ತು. ಇದರಿಂದ ಸಮಯವೂ ಉಳಿತಾಯವಾಗಿ ತ್ವರಿತವಾಗಿ ವರದಿ ಸಿಗುತ್ತಿತ್ತು. ಆದರೆ, ಇದೀಗ ಶುಕ್ರವಾರದಿಂದ ಟೆಸ್ಟಿಂಗ್ ಲ್ಯಾಬ್ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದು, ಸ್ಯಾಂಪಲ್‌ಗಳನ್ನು ಪುನಃ ಬೆಂಗಳೂರಿಗೆ ಕಳುಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಲ್ಯಾಬ್‌ನಲ್ಲಿ ಈವರೆಗೆ ಸುಮಾರು 1600ರಿಂದ 2 ಸಾವಿರ ಸ್ಯಾಂಪಲ್‌ಗಳನ್ನು ಟೆಸ್ಟ್ ಮಾಡಲಾಗಿದೆ. ಇದೀಗ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸಂಗ್ರಹಿಸಲಾಗಿದ್ದ ಶುಕ್ರವಾರ ಸಂಗ್ರಹಿಸಲಾಗಿದ್ದ 450ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಬೆಂಗಳೂರಿನ ಲ್ಯಾಬ್‌ಗ ಕಳುಹಿಸಲಾಗಿದೆ. ಬಳ್ಳಾರಿ ಲ್ಯಾಬ್‌ನಲ್ಲಿ 8 ತಾಸಿನಲ್ಲಿ ಬರುವ ಸ್ಯಾಂಪಲ್‌ಗಳ ವರದಿ ಬೆಂಗಳೂರು ಲ್ಯಾಬ್‌ನಿಂದ ವರದಿಗಾಗಿ 48 ಗಂಟೆ ಕಾಯಬೇಕಾಗಿದೆ ಎಂದು ವಿಮ್ಸ್ ನಿರ್ದೇಶಕ ಡಾ| ಬಿ.ದೇವಾನಂದ ಸ್ಪಷ್ಟಪಡಿಸಿದ್ದಾರೆ.
ಏನದು ಸಮಸ್ಯೆ?: ವಿಮ್ಸ್‌ನ ಕೋವಿಡ್ ಟೆಸ್ಟಿಂಗ್ ಲ್ಯಾಬ್ ನಲ್ಲಿ ಕಂಟ್ರೋಲ್ ವರ್ಸಸ್ ರಿಪೋರ್ಟ್ ಸ್ಯಾಂಡ್ರೈಜೇಷನ್ ಸರಿಯಾಗಿ ಬರುತ್ತಿಲ್ಲ. ಪ್ರತಿ ಬ್ಯಾಚ್‌ನಲ್ಲಿ ಬರುವ ಕಿಟ್‌ಗಳನ್ನು ಸ್ಯಾಂಡ್ರೈಜೇಷನ್ ಮಾಡಿಕೊಳ್ಳಬೇಕು. ಜತೆಗೆ ಅದರ ವ್ಯಾಲಿಡಿಟಿ ಎನ್‌ಐಜಿಗೆ ಮ್ಯಾಚ್ ಆಗಬೇಕು. ಅದು ಆಗಿಲ್ಲ. ಅದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಕುರಿತು ತಾಂತ್ರಿಕ ನಿಪುಣರಿಂದ ವೀಡಿಯೋ ಕಾಲ್ ಮೂಲಕ ಸರಿಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಿಪುಣರು ಬಂದರೆ ಸರಿಯಾಗಲಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಿ ಶೀಘ್ರದಲ್ಲೇ ಲ್ಯಾಬ್ ಕಾರ್ಯಾರಂಭ ಮಾಡಲಿದೆ. ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ ಎಂದು ಡಾ| ದೇವಾನಂದ ತಿಳಿಸಿದ್ದಾರೆ.
ಬಳ್ಳಾರಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಗಿತಗೊಂಡಿರುವುದು ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಸ್ಯಾಂಪಲ್ ತೆಗೆದುಕೊಂಡವರಲ್ಲಿ ಆತಂಕ ಹೆಚ್ಚಿಸಿದೆ. ರಾಯಚೂರಿನಲ್ಲಿ ಆಂಧ್ರದಿಂದ ನುಸುಳುತ್ತಿರುವವರ ಕಾಟ ಹೆಚ್ಚಾಗಿದೆ. ಇಷ್ಟುದಿನ ನಿರಾಳವಾಗಿದ್ದ ಕೊಪ್ಪಳ ಜಿಲ್ಲೆಯಲ್ಲೂ ಕಳೆದೆರಡು ದಿನಗಳಿಂದ ಆತಂಕ ಹೆಚ್ಚಾಗಿದ್ದು, ಬೆಂಗಳೂರಿಗೆ ಕಳುಹಿಸಲಾಗಿರುವ ಸ್ಯಾಂಪಲ್‌ಗಳ ವರದಿಯಿಂದಾಗಿ ಕೊಪ್ಪಳ ಜಿಲ್ಲೆಯ ಸ್ಥಿತಿಗತಿ ನಿರ್ಣಯವಾಗಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಬೆಂಗಳೂರಿನಿಂದ ವರದಿ ಬರಲು 48 ಗಂಟೆ ಕಾಯಬೇಕಾಗಿದೆ.
ಬಳ್ಳಾರಿ ವಿಮ್ಸ್ ಆಸ್ಪತ್ರೆ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಶುಕ್ರವಾರ ಮಧ್ಯಾಹ್ನದಿಂದ ಲ್ಯಾಬ್ ಸ್ಥಗಿತಗೊಂಡಿದೆ. ಶುಕ್ರವಾರ ಸಂಗ್ರಹಿಸಲಾದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಸ್ಯಾಂಪಲ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಇನ್ನೆರಡು ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ.
ಡಾ| ಬಿ. ದೇವಾನಂದ,
ವಿಮ್ಸ್ ನಿರ್ದೇಶಕರು ಬಳ್ಳಾರಿ