ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಜಿಲ್ಲೆಯ ಜಿಂದಾಲ್ ಸಂಸ್ಥೆಯಲ್ಲಿ ದಿನೇ-ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ. ಜತೆಗೆ ಜಿಂದಾಲ್ ಕಾರ್ಖಾನೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಕಳೆದ ಜೂನ್ 3ರಂದು ತಮಿಳುನಾಡುನಿಂದ ಬಂದಿದ್ದ ನೌಕರರನ್ನು ಕ್ವಾರಂಟೈನ್ ಮಾಡದೆ ಇರುವುದು ಜಿಂದಾಲ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಕಳೆದ ಒಂದು ವಾರದಲ್ಲಿ ಕೇವಲ 13 ಪ್ರಕರಣಗಳು ಇದ್ದ ಕಾರ್ಖಾನೆಯಲ್ಲಿ ಜೂನ್ 10ರಂದು ಒಂದೇ ದಿನ ಜಿಲ್ಲಾದ್ಯಂತ 23 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 19 ಪ್ರಕರಣಗಳು ಜಿಂದಾಲ್‌ನ ಸೋಂಕಿತರ ಸಂಪರ್ಕದಿಂದ ಸೋಂಕು ಆವರಿಸಿದೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಕಾರ್ಖಾನೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಕೋವಿಡ್ ವಿಷಯದಲ್ಲಿ ಜಿಲ್ಲಾಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಗೆ ಸಾರ್ವಜನಿಕವಾಗಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದವು. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿಯಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ ಇದ್ದು, ಗುಣಮುಖದ ಪ್ರಮಾಣ ಹೆಚ್ಚು ಇದ್ದುದ್ದೇ ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ, ತಮಿಳುನಾಡಿಗೆ ಹೋಗಿ ಕೋವಿಡ್ ಸೋಂಕಿತ ತಾಯಿಯನ್ನು ನೋಡಿಕೊಂಡು ಬಂದ ನೌಕರನಿಂದ ಬಂದ ಸೋಂಕನ್ನು ಹರಡದಂತೆ ನೋಡಿಕೊಳ್ಳುವಲ್ಲಿ ಕಾರ್ಖಾನೆ ವಿಫಲವಾಗಿದ್ದು ಒಂದು ಕಡೆಯಾದರೆ, ಜಿಲ್ಲಾಡಳಿತ ಅತ್ಯಂತ ಮೃಧು ಧೋರಣೆಯಿಂದ ಜೆಎಸ್‌ಡಬ್ಲ್ಯೂ ಕಡೆ ನೋಡಿದ್ದು ಮತ್ತೊಂದು ಕಡೆ ಸೋಂಕು ಹರಡಲು ಕಾರಣವಾಗಿದೆ.
ಏಕಾಏಕಿ ಸೋಂಕಿತರ ಪ್ರಮಾಣ 71ರಿಂದ ಶತಕದ ಅಂಚಿಗೆ 94ಕ್ಕೆ ಏರಿಕೆಯಾಗಿದೆ. ಪ್ರತಿನಿತ್ಯ ಒಂದು ಎರಡು ಪ್ರಕರಣ ಪತ್ತೆಯಾಗುತ್ತಿದ್ದ ಜೆಎಸ್ಡಬ್ಲ್ಯೂ ನಲ್ಲಿ ಇದೀಗ ಸೋಂಕಿತರ ಸಂಖ್ಯೆ ಬುಧವಾರ ಏಕಾಏಕಿ 32ಕ್ಕೆ ಏರಿಕೆಯಾಗಿದೆ. ಕಾರ್ಖಾನೆ ಸೋಂಕು ತಡೆಯುವಲ್ಲಿ ವಿಫಲ ಆಗಿರುವುದನ್ನು ಮನಗಂಡ ಜಿಲ್ಲಾಡಳಿತ, ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಜಿಂದಾಲ್ ಆಡಳಿತ ಮಂಡಳಿಯ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಆದರೆ, ಬಲ್ಲ ಮೂಲಗಳ ಪ್ರಕಾರ ಈಗಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿದೆ ಎನ್ನಲಾಗುತ್ತಿದೆ.
ಸದ್ಯ ಎರಡಂಕಿಯಲ್ಲಿ ಬರುತ್ತಿರುವ ಪ್ರಕರಣಗಳ ಸಂಖ್ಯೆಯಿಂದಲೇ ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆ ಹತ್ತಾರು ಕಂಟೈನ್‌ಮೆಂಟ್ ಪ್ರದೇಶಗಳ ಸೃಷ್ಟಿಯಾಗಿದೆ. ಇದು ಹೀಗೆ ಮುಂದುವರಿಯುತ್ತಾ ಹೋದರೆ ಬಳ್ಳಾರಿ ನಗರ ಸೇರಿದಂತೆ ಜಿಂದಾಲ್‌ನಲ್ಲಿ ಕೆಲಸ ಮಾಡುವ ನೌಕರರು ಇರುವ ಪಟ್ಟಣಗಳನ್ನೇ ಲಾಕ್‌ಡೌನ್ ಮಾಡಿದರೂ ಅಚ್ಚರಿ ಪಡುವಂತಿಲ್ಲ ಎನ್ನಲಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಜಿಂದಾಲ್ ಸಂಸ್ಥೆ ಜನರ ಜೀವನದ ಜೊತೆ ಆಟವಾಡುವುದನ್ನು ಬಿಡಬೇಕಿದೆ. ಸೋಂಕು ಹರಡದಂತೆ ತುರ್ತು ಕ್ರಮ ಕೈಗೊಳ್ಳಬೇಕಿದೆ.