ಬಳ್ಳಾರಿ: ಮಹಾಮಾರಿ ಕೋವಿಡ್ ವೈರಸ್ ನಮ್ಮನ್ನು ಬಿಟ್ಟು ಹೋಗಲ್ಲ. ಇನ್ನೂ ಎರಡ್ಮೂರು ವರ್ಷ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಇದರ ಜೊತೆಗೆ ಮುಂಜಾಗೃತ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ಸದ್ಯಕ್ಕೆ ನಮ್ಮನ್ನು ಬಿಟ್ಟು ಹೋಗುವಂತೆ ಕಾಣಿಸುತ್ತಿಲ್ಲ. ಅದರ ಜೊತೆಗೆ ನಾವೂ ಜೀವನ ನಡೆಸುವುದನ್ನು ಕಲಿಯಬೇಕಿದೆ. ಈ ಕುರಿತು ಸರ್ಕಾರ ಕಳೆದ ಎರಡು ತಿಂಗಳಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಬ್ಬರೂ ಇದನ್ನು ತೊಲಗಿಸಲು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದಿಂದ ನಾಲ್ಕನೇ ಹಂತದ ಲಾಕ್‌ಡೌನ್ ನಿಯಮ ಪ್ರಕಟವಾಗಿದೆ. ದೇಶದ ಕೆಲ ರಾಜ್ಯಗಳಲ್ಲಿ ಸದ್ಯ ಇರುವ ನಿಯಮಗಳನ್ನೇ ಮುಂದುವರೆಸುವ ಸಾಧ್ಯತೆ ಹೆಚ್ಚಿದೆ. ಪ್ರಧಾನಿ ಮೋದಿಯವರು ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಗ್ರೀನ್ ಝೋನ್, ಆರೇಂಜ್ ಝೋನ್‌ಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಿ ಜನ ಜೀವನಕ್ಕೆ ಅನುವು ಮಾಡಿಕೊಡಬೇಕಿದೆ. ರಾಜ್ಯಕ್ಕೆ ಆಗಮಿಸುವ ಎಲ್ಲರನ್ನೂ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಮುಂಬರುವ 6 ತಿಂಗಳಲ್ಲಿ ರಾಜ್ಯದಲ್ಲಿ 82 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆಯಾಗಲಿದೆ. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಹಿತರಕ್ಷಣೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇನ್ನುಮುಂದೆ ಜನರ ಸಹಕಾರ ಮುಖ್ಯ ಎಂದು ತಿಳಿಸಿದರು.
ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸೇರಿದಂತೆ ಇತರರಿದ್ದರು. ಇದಕ್ಕೂ ಮುನ್ನ ನಗರದ ಮಿಲ್ಲರ್‌ಪೇಟೆಯಲ್ಲಿ ಸಚಿವರ ಬೆಂಬಲಿಗರು ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಉಚಿತ ದಿನಸಿ ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ಲಾಕ್‌ಡೌನ್
ನಿಯಮ ಉಲ್ಲಂಘನೆಯಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ರಾಮುಲು, ಆಶಾ ಕಾರ್ಯಕರ್ತೆಯರಿಗೆ ಚಪ್ಪಾಳೆ ತಟ್ಟಿ, ಹೂ ಮಳೆ ಸುರಿಸಿ ಕಿಟ್‌ಗಳನ್ನು ವಿತರಿಸಿದರು. ಈ ವೇಳೆ ಸಾಮಾಜಿಕ ಅಂತರ ಉಲ್ಲಂಘನೆಯಾಗಿದ್ದು ಕಂಡು ಬಂತು.