ಬಳ್ಳಾರಿ: ಕೊರೊನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಘೋಷಿಸಿರುವ ಒಂದು ವಾರ ಬಂದ್‌ಗೆ ನಗರದಲ್ಲಿ ಚಿತ್ರಮಂದಿರಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಎಂದಿನಂತೆ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದವು.
ಸಾರಿಗೆ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಕರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿತ್ತು. ರಾಜ್ಯ ಸರ್ಕಾರ ಬಂದ್ ಘೋಷಣೆ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ ಚಿತ್ರಮಂದಿರಗಳು ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಬಂದ್ ಫಲಕವನ್ನು ಪ್ರದರ್ಶಿಸಲಾಗಿತ್ತು.
ನಗರದ ಎಪಿಎಂಸಿ ಆವರಣದಲ್ಲಿನ ತರಕಾರಿ ಮಾರುಕಟ್ಟೆ ಬೆಳಗ್ಗೆ ಜನಜಂಗುಳಿಯಿಂದ ತುಂಬಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ಎಂದಿನಂತೆ ಜನಸಂದಣಿ ಕಂಡುಬಂತು. ಇನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊರಬರಲಿಲ್ಲ. ಶಾಲಾ ವಾಹನಗಳು ರಸ್ತೆಗಿಳಿಯಲಿಲ್ಲ. ಇನ್ನು ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಕಡಿಮೆಯಾದಂತಿತ್ತು.
ಅದೇ ರೀತಿ ಶಾಪಿಂಗ್ ಮಾಲ್‌ಗಳು ತೆರೆದಿದ್ದವು. ಸದಾ ಜನಜಂಗುಳಿಯಿಂದ ಕಂಡುಬರುತ್ತಿದ್ದ ಬೆಂಗಳೂರು ರಸ್ತೆ ಬೇಸಿಗೆಯ ದಿನಗಳಾದ್ದರಿಂದ ಮಧ್ಯಾಹ್ನದ ವೇಳೆ ಒಂದಷ್ಟು ಖಾಲಿಖಾಲಿ ಕಂಡುಬಂತು. ಇನ್ನು ಬೆಳಗಿನ ಜಾವ ಬರುವ ವಾಯುವಿಹಾರಿಗಳು ಎಂದಿನಂತೆ ಕ್ರೀಡಾಂಗಣ, ಮೈದಾನ, ಉದ್ಯಾನವನಗಳಲ್ಲಿ ತಮ್ಮ ದೈಹಿಕ ಕಸರತ್ತಿನಲ್ಲಿ ತೊಡಗಿದ್ದರು.
ಇನ್ನು ಎರಡನೇ ಶನಿವಾರ ಸರ್ಕಾರಿ ರಜೆಯಾದ್ದರಿಂದ ಸರ್ಕಾರಿ ಕಚೇರಿಗಳು ಸಹ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಆದರೆ, ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಆತಂಕವಿದೆ ಹೊರತು, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ತಿರುಗಾಡುವವರ ಸಂಖ್ಯೆ ಮಾತ್ರ ತೀರಾ ಕಡಿಮೆಯಾಗಿದ್ದು, ಬಿಸಿಲಿನ ತಾಪಮಾನ ಹೆಚ್ಚಾಗಿ ಇರುವುದರಿಂದ ಬಳ್ಳಾರಿಯಲ್ಲಿ ಈ ಬಿಸಿಲಿಗೆ ಯಾವ ವೈರಸ್ ಬರಲಿದೆ ಎಂಬ ಮನೋಭಾವ ನಗರದ ನಾಗರಿಕರದ್ದಾಗಿದೆ.
ಹಾಗಾಗಿ ರಾಜ್ಯ ಸರ್ಕಾರ ಒಂದುವಾರ ಬಂದ್ ಘೋಷಿಸಿದ್ದರೂ, ಜನರು ಮಾತ್ರ ಎಂದಿನಂತೆ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ಶೇ.30-35 ರಷ್ಟು ವಹಿವಾಟು ನಷ್ಟ?: ರಾಜ್ಯ ಸರ್ಕಾರ ಬಂದ್ ಘೋಷಿಸಿದ ಹಿನ್ನೆಲೆಯಲ್ಲಿ ನಗರದಲ್ಲಿನ ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಒಂದಷ್ಟು ಕಡಿಮೆಯಾಗಿತ್ತು. ಸಾರಿಗೆ ಬಸ್‌ಗಳು, ಪ್ರಯಾಣಿಕ ವಾಹನಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಒಂದಷ್ಟು ನಷ್ಟವಾಗಿರಬಹುದು. ಇನ್ನು ವಾಣಿಜ್ಯ ಮಳಿಗೆಗಳು ಸಹ ಅಲ್ಪಪ್ರಮಾಣದಲ್ಲಿ ಗ್ರಾಹಕರ ಕೊರತೆ ಎದುರಿಸಿದ್ದು, ಅಲ್ಪಪ್ರಮಾಣದಲ್ಲಿ ವ್ಯಾಪಾರ ವಹಿವಾಟು ಕುಸಿತವಾಗಿರಬಹುದು. ಒಟ್ಟಾರೆಯಾಗಿ ಶೇ. 30ರಿಂದ 35ರಷ್ಟು ನಷ್ಟವಾಗಿರಬಹುದು ಎಂದು ಹೊಟೇಲ್ ಮಾಲೀಕರೊಬ್ಬರು ಹೇಳಿದರು.