ಬಳ್ಳಾರಿ: ನಗರದ ಹೊರವಲಯದಲ್ಲಿ ಮುಂಡ್ರಿಗಿ ಆಶ್ರಯ ಮಹಾತ್ಮಗಾಂಧಿ ಟೌನ್ ಶಿಪ್ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯದ ಪ್ರಗತಿಯನ್ನು ಶಾಸಕ ಜಿ. ಸೋಮಶೇಖರ್ ರೆಡ್ಡಿ ಭಾನುವಾರ ಪರಿಶೀಲನೆ ನಡೆಸಿದರು.
ಈ ವೇಳೆ ನಿರ್ಮಾಣದ ಹೊಣೆಹೊತ್ತಿರುವ ಗುತ್ತಿಗೆದಾರರು, ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆಸೂಚನೆಗಳನ್ನು ನೀಡಿದರು. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜಿ. ಮಶೇಖರರೆಡ್ಡಿ, ಈ ಟೌನ್ ಶಿಪ್ ನಿರ್ಮಾಣಕ್ಕೆ 300 ಎಕರೆ ಜಮೀನನ್ನು ಖರೀದಿಸಲಾಗಿದ್ದು, ಮೊದಲ ಹಂತದಲ್ಲಿ ಜಿ+2 ಮಾದರಿಯ 5616
ಮನೆಗಳನ್ನು 96 ಎಕರೆ ಪ್ರದೇಶದಲ್ಲಿ 338.25 ಕೋಟಿ ರೂ. ವೆಚ್ಚದಲ್ಲಿ ಶೇರ್ ವೆಲ್ ತಂತ್ರಜ್ಞಾನದಡಿ ನಿರ್ಮಿಸಲಾಗುತ್ತಿದೆ ಎಂದರು.
ಪ್ರತಿಯೊಂದು ಮನೆ ನಿರ್ಮಾಣಕ್ಕೆ 6.2 ಲಕ್ಷ ರೂ. ವೆಚ್ಚವಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ 1.80 ಲಕ್ಷ ರೂ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 1.50 ಲಕ್ಷ ರೂ. ಸಬ್ಸಿಡಿ ಲಭಿಸಲಿದೆ. ಇದರೊಂದಿಗೆ 1.45 ಲಕ್ಷ ರೂ. ಬ್ಯಾಂಕ್‌ಗಳಿಂದ ಸಾಲಸೌಲಭ್ಯ ಕಲ್ಪಿಸಲಾಗುತ್ತಿದೆ. ಉಳಿದ 1.27 ಲಕ್ಷ ರೂ. ಹಣ ಫಲಾನುಭವಿಗಳು ಭರಿಸಬೇಕಿದ್ದು, ಪಾಲಿಕೆಯಲ್ಲಿ ಎಸ್ಸಿ/ಎಸ್ಟಿಗಾಗಿ ಮೀಸಲಿದ್ದ ಶೇ. 22 ರಷ್ಟು ಅನುದಾನದಲ್ಲಿ ಸ್ವಲ್ಪ ಹಣ ಭರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಉಳಿದ ಹಣ ಫಲಾನುಭವಿಗಳು ಭರಿಸಬೇಕು. ಇನ್ನು ಇತರೆ ವರ್ಗದ ಫಲಾನುಭವಿಗಳು 1.87ಲಕ್ಷ ರೂ. ಭರಿಸಬೇಕು ಎಂದರು.
ಈ ಟೌನ್‌ಶಿಪ್‌ನಲ್ಲಿ 68 ಎಕರೆ ಪ್ರದೇಶದಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳು, ರಸ್ತೆ, ಯುಜಿಡಿ, ಬಸ್ ನಿಲ್ದಾಣ, ಶಾಲಾ-ಕಾಲೇಜುಗಳು, ಆಸ್ಪತ್ರೆ, ಉದ್ಯಾನವನ ಸೇರಿದಂತೆ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಅಲ್ಲೀಪುರ ಕೆರೆಯಿಂದ ನೀರಿನ ಸೌಕರ್ಯ ಈ ಟೌನ್ ಶಿಪ್‌ಗೆ ಕಲ್ಪಿಸಲಾಗುವುದು ಎಂದರು.
ರಸ್ತೆ, ಯುಜಿಡಿ, ವಿದ್ಯುತ್ ಸ್ಟೇಶನ್, ನೀರು ಸರಬರಾಜಿಗೆ ಜಿಲ್ಲಾ ಖನಿಜ ನಿಧಿಯಡಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು. ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಎನ್‌ಎಂಡಿಸಿ ಸಂಸ್ಥೆಯು 20 ಕೋಟಿ ರೂ. ನೀಡಿದೆ. ಹೀಗಾಗಿ ಟೌನ್‌ಶಿಪ್ ಗೆ ಎನ್‌ಎಂಡಿಸಿ ಮುಂಡ್ರಿಗಿ ಮಹಾತ್ಮಗಾಂಧಿ ಟೌನ್‌ಶಿಪ್ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. 2019 ಸೆಪ್ಟೆಂಬರ್ ತಿಂಗಳಿಂದ ಕಾಮಗಾರಿ ಆರಂಭವಾಗಿದ್ದು, 2022ರೊಳಗಾಗಿ ಪೂರ್ಣಗೊಳಿಸಲು ಕಾಲಾವಧಿ ಯನ್ನು ನೀಡಿದೆ. ಸದ್ಯ 120ಕ್ಕೂ ಹೆಚ್ಚು ಬ್ಲಾಕ್‌ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಈ ಸಂದರ್ಭದಲ್ಲಿ ಪಾಲಿಕೆ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಖಾಜಾ ಮೊಹಿನುದ್ದೀನ್, ರಾಬಕೋ ನಿರ್ದೇಶಕ ವೀರಶೇಖರರೆಡ್ಡಿ, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಮುಖಂಡರಾದ ಪಾಲಣ್ಣ, ಕೃಷ್ಣಾರೆಡ್ಡಿ, ಶಂಕ್ರಪ್ಪ ಮತ್ತಿತರರು ಇದ್ದರು.