ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ಸಂಡೂರು ರೆಸಾರ್ಟ್ ನಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ದಿಗೋಷ್ಠಿ ಮಾಡುವಾಗಲೂ ಅವರ ಪಕ್ಕದಲ್ಲಿ ಕೂಡಲು ನಾಯಕರು, ಮುಖಂಡರು ಹಿಂಜರಿಯುತ್ತಿದ್ದಾರೆ. ಈ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಭಯದಿಂದ ಅವರನ್ನು ಸದನದಲ್ಲೂ ಕೂಡ ಶಾಸಕರು, ಸಚಿವರು ಅವರೊಂದಿಗೆ ಸಮರ್ಥಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರು, ಬಿಜೆಪಿಯ ಕಾಲದ 21 ಹಗರಣಗಳಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಮೂರು ತಿಂಗಳಾದರೂ ತನಿಖೆ ಮಾಡದೆ ಕಡುಬು ತಿನ್ನುತ್ತಿದ್ದರಾ ಎಂದು ಪ್ರಶ್ನಿಸಿದ ಕಾರಜೋಳ, ಸಿಎಂ ಸಿದ್ದರಾಮಯ್ಯನವರು ಹತಾಶೆ ಮನೋಭಾವದಿಂದ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ನವರ ಹಗರಣ ಬಂದಿದ್ದಕ್ಕೆ ಆರೋಪಗಳನ್ನು ಮಾಡುತ್ತಿದ್ದು, ಅವೆಲ್ಲ ಸುಳ್ಳು ಆರೋಪಗಳು ಎಂದು ತಿಳಿಸಿದರು.
ವಾಲ್ಮೀಕಿ ಹಗರಣವನ್ನು ನಾನು ಮಾಡಿಲ್ಲ ಅಧಿಕಾರಿಗಳು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯದ ಮುಖ್ಯಮಂತ್ರಿಗಳಾಗಿ ನಿಮ್ಮ ಪಾತ್ರವೇನು? ನೀವು ಅಸಹಾಯಕರಾ? ಏಕೆ ಅಧಿಕಾರಿಗಳಿಗೆ ಹಗರಣ ಮಾಡಲು ಬಿಟ್ಟಿದ್ದೀರಿ? ಅಧಿಕಾರಿಗಳು ನಿಮ್ಮ ಗಮನಕ್ಕೆ ತಂದು ಮಾಡಿದ್ದಾರೋ, ಹೇಳದೇನೇ ಮಾಡಿದ್ದಾರೊ ಒಟ್ಟಿನಲ್ಲಿ ನಿಮ್ನ ಸರ್ಕಾರದಲ್ಲಿ ಹಗರಣ ಆಗಿದೆ. ನೀವು ಜವಾಬ್ದಾರಿ ಹೊರಬೇಕು. ನಿಮ್ಮ ದಕ್ಷತೆ, ಪ್ರಾಮಾಣಿಕೆಗೆ ಮೆರಗು ಬರಬೇಕಾದರೆ, ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ಬರಬೇಕಾದರೆ ರಾಜೀನಾಮೆ ನೀಡಿ, ನೈತಿಕ ಹೊಣೆಹೊತ್ತು, ನಿಷ್ಪಕ್ಷಪಾತವಾದ ತನಿಖೆಗೆ ವಹಿಸಬೇಕು ಎಂದು ತಿಳಿಸಿದರು.