ಬಳ್ಳಾರಿ: ನಗರದ ಹೃದಯಭಾಗದ ಪ್ರಮುಖ ಗಡಗಿ ಚನ್ನಪ್ಪ ವೃತ್ತದಲ್ಲಿನ ಗಡಿಯಾರ ಕಂಬವನ್ನು ರಾತ್ರೋರಾತ್ರಿ ತೆರವುಗೊಳಿಸಿರುವ ಜಿಲ್ಲಾಡಳಿತ, ಜನಪ್ರತಿನಿಧಿಗಳ ಧೋರಣೆತನ್ನು ಖಂಡಿಸಿ ಪಾಲಿಕೆ ಕಾಂಗ್ರೆಸ್ ಸದಸ್ಯರು ಸ್ಥಳದಲ್ಲೇ ಬುಧವಾರ ಬೆಳಗಿನ ಜಾವ ಧರಣಿ ನಡೆಸಿದರು.
ಗಡಗಿ ಚನ್ನಪ್ಪ ವೃತ್ತದಲ್ಲಿ ಈ ಹಿಂದೆ ಇದ್ದ ಹಳೆಯ ಗಡಿಯಾರ ಕಂಬವನ್ನು ಮಾಜಿ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವಧಿಯಲ್ಲಿ ನಿರ್ಮಿಸಿದ್ದು. ತನ್ನದೇ ಆದ ಹಿನ್ನೆಲೆ ಹೊಂದಿದೆ. ಆದರೆ, ಅಂತಹ ಗಡಿಯಾರ ಕಂಬವನ್ನು ಕಳೆದ ಒಂದು ದಶಕದ ಹಿಂದೆ ರಾತ್ರೋರಾತ್ರಿ ತೆರವುಗೊಳಿಸಿ ಮಾಯ ಮಾಡಲಾಗಿತ್ತು. ಆ ಕುರಿತು ಆಗ ಪ್ರಕರಣವನ್ನು ದಾಖಲಿಸಲಾಗಿತ್ತು. ಅದನ್ನು ಒಡೆದವರು ಯಾರು? ಏಕೆ ಒಡೆದರು ? ಎಂಬುದು ತನಿಖೆಯಾಗಿಲ್ಲ. ಈ ಬಗ್ಗೆ ಎನ್ ಒ ಸಿ ಪಡೆದು ಗಡಿಯಾರ ಕಂಬವನ್ನು ಒಡೆಯುವಂತೆ ಪಾಲಿಕೆ ಸದಸ್ಯರು ಪ್ರೊಸಿಡಿಂಗ್ ಮಾಡಿದ್ದಾರೆ.
ಆದರೆ, ಇದನ್ನು ಗಣನೆಗೆ ತೆಗೆದುಕೊಳ್ಳದ ಶಾಸಕರು, ಸಚಿವರು, ಪಾಲಿಕೆ ಮೇಯರ್, ಉಪಮೇಯರ್, ಸದಸ್ಯರಿಗೆ ಮಾಹಿತಿ ನೀಡದೆ ರಾತ್ರೊ ರಾತ್ರಿ ಒಡೆದಿದ್ದಾರೆ. ಇದು ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರಫೀಕ್, ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಪಾಲಿಕೆ ಸಭಾ ಮುಖ್ಯಸ್ಥ ಗಾದೆಪ್ಪ ಆರೋಪಿಸಿದರು.
ವೃತ್ತದಲ್ಲಿ ಸದ್ಯ ಇದ್ದ ಗಡಿಯಾರ ಕಂಬವನ್ನು ಕಳೆದ ಐದಾರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಹೊಸದಾಗಿ ಗಡಿಯಾರ ಕಂಬ ನಿರ್ಮಿಸುವುದಾದರೆ ಪಾಲಿಕೆಯ ಸದಸ್ಯರು ಸೇರಿ ಎಲ್ಲರಿಗೂ ಮಾಹಿತಿ ನೀಡಿ ಅದನ್ನು ಬೇರೆ ವೃತ್ತಕ್ಕೆ ಸ್ಥಳಾಂತರ ಮಾಡಬಹುದಿತ್ತು. ಅದರಲ್ಲಿನ ಒಂದೊಂದು ಗಡಿಯಾರ ಕನಿಷ್ಟ ಮೂರು ಲಕ್ಷ ರೂ. ಮೌಲ್ಯದ್ದಾಗಿದೆ. ಅಭಿವೃದ್ಧಿಗೆ ಯಾರೂ ವಿರೋಧ ಮಾಡಲ್ಲ ಎಂದು ಮಹ್ಮದ್ ರಫೀಕ್ ತಿಳಿಸಿದರು.
ಧರಣಿಯಲ್ಲಿ ಪಾಲಿಕೆ ಸದಸ್ಯರಾದ ಎಂ.ಪ್ರಭಂಜನ್ ಕುಮಾರ್, ಮುಲ್ಲಂಗಿ ನಂದೀಶ್, ಮಿಂಚು ಶ್ರೀನಿವಾಸ್, ರಾಜಶೇಖರ್, ಮುಖಂಡರಾದ ಜಗನ್ನಾಥ, ಡಿ.ಸೂರಿ, ಶಿವರಾಜ್, ಮಾಜಿ ಸದಸ್ಯೆ ಪರ್ವಿನ್ ಬಾನು, ಕುಮಾರಮ್ಮ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ : 3.30 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ರದ್ದು: ಹೊಸದಾಗಿ 2.70 ಲಕ್ಷ ಕಾರ್ಡ್ ಹಂಚಿಕೆ