Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ?

01:22 PM Dec 16, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಗಣಿನಾಡು ಬಳ್ಳಾರಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಹಾಲಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಮತ್ತೂಂದು ಅವಧಿಗೆ ಮುಂದುವರೆಯಲಿದ್ದಾರಾ..? ಅಥವಾ ಹೊಸಬರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರಾ…? ಎಂಬುದು ಪಕ್ಷದ ವಲಯದಲ್ಲಿ ಕುತೂಹಲ ಮೂಡಿಸಿದೆ.

Advertisement

ಈವರೆಗೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಚನ್ನಬಸವನಗೌಡ ಪಾಟೀಲ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷ ಮುಂದಾಗಿದೆ. ಪಕ್ಷದಲ್ಲಿನ ಸಾಂಸ್ಥಿಕ ಚುನಾವಣೆಗಳು ಈಗಾಗಲೇ ಆರಂಭವಾಗಿದ್ದು, ಮುಕ್ತಾಯಗೊಳ್ಳುವ ಹಂತದಲ್ಲಿವೆ. ಹೊಸಪೇಟೆ, ಸಂಡೂರು ತಾಲೂಕುಗಳನ್ನು ಹೊರತುಪಡಿಸಿ, ಜಿಲ್ಲೆಯ ಉಳಿದೆಲ್ಲ ಮಂಡಲಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಹೊಸಪೇಟೆ, ಸಂಡೂರು ತಾಲೂಕುಗಳಲ್ಲಿ ಆಕಾಂಕ್ಷಿಗಳ ಬಗ್ಗೆ ಒಮ್ಮತಾಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಈ ಎರಡು ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇನ್ನು ಶೀಘ್ರದಲ್ಲೇ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಬರುವ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ. ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದ್ದು, ಡಿಸೆಂಬರ್‌ 19 ರಂದು ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಹಾಲಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡರ ಅವಧಿಯಲ್ಲಿ ಲೋಕಸಭೆ, ವಿಜಯನಗರ ಕ್ಷೇತ್ರದ ಉಪಚುನಾವಣೆ ಸೇರಿ ಇತ್ತೀಚೆಗೆ ನಡೆದ ಕೆಲ ಪಪಂ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಚನ್ನಬಸವನಗೌಡ ಮತ್ತೂಮ್ಮೆ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ ಬುಡಾ ಮಾಜಿ ಅಧ್ಯಕ್ಷ ಗುರುಲಿಂಗನಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎ.ರಾಮಲಿಂಗಪ್ಪ, ಜಿಪಂ ಮಾಜಿ ಸದಸ್ಯ ಗೋನಾಳ್‌ ರಾಜಶೇಖರಗೌಡ, ಅನಿಲ್‌ ನಾಯ್ಡು ಸೇರಿ ಹಲವರು ರೇಸ್‌ನಲ್ಲಿದ್ದಾರೆ. ಪಕ್ಷದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಕ್ಷ ನಿಷ್ಠೆಯನ್ನು ಯಾರೊಬ್ಬರೂ ಪ್ರಶ್ನಿಸದಿದ್ದರೂ, ಮುಂದಿನ ದಿನಗಳಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಓಡಾಡುವವರು ಯಾರು ಎಂಬುದನ್ನು ಪಕ್ಷದ ಹಿರಿಯ ವರಿಷ್ಠರು ಚಿಂತನೆ ನಡೆಸಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಜಿಲ್ಲೆಯಲ್ಲಿ ಲೋಕಸಭೆ ಕ್ಷೇತ್ರ ಸೇರಿದಂತೆ 4 ವಿಧಾನಸಭೆ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ರಾಜ್ಯದಲ್ಲೂ ಆಡಳಿತ ಪಕ್ಷವಾಗಿಯೂ ಇದೆ. ಬಳ್ಳಾರಿ ಜಿಪಂ ಸೇರಿ ಹಲವು ತಾಪಂಗಳು ಸಹ ಬಿಜೆಪಿ ಹಿಡಿತದಲ್ಲಿವೆ. ಹೀಗಾಗಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲಿ ಹಿನ್ನಡೆಯಾಗದಂತೆ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಬೆಳೆಸುವವರನ್ನು ಅಧ್ಯಕ್ಷರನ್ನಾಗಿಸಬೇಕು ಎಂಬ ಚಿಂತನೆ ಪಕ್ಷದ ವರಿಷ್ಠರದ್ದಾಗಿದೆ. ಅಲ್ಲದೇ, ಜಿಲ್ಲೆಯಲ್ಲಿ ಶಾಸಕರು ಮತ್ತು ಪಕ್ಷದ ಕೆಲವು ಪ್ರಮುಖರ ನಡುವೆ ಇರುವ ಅಲ್ಪಮಟ್ಟಿನ ಅಸಮಾಧಾನಗಳನ್ನು ಸಹ ಹೋಗಲಾಡಿಸಬೇಕಾದ ಕೆಲಸ ಅಧ್ಯಕ್ಷರದ್ದಾಗಿದೆ. ಹಾಗಾಗಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ, ಸಾಮರ್ಥ್ಯ ಇರುವವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕೆಲವರ ನಿರಾಸಕ್ತಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಅತಂತ್ರ ಪರಿಸ್ಥಿತಿ ಇದ್ದಾಗ ಬಳ್ಳಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇತ್ತು. ಹಲವು ಆಕಾಂಕ್ಷಿಗಳು ಜಿಲ್ಲಾಧ್ಯಕ್ಷರಾಗಲು ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ರಾಜ್ಯದಲ್ಲಿ ಈಚೆಗೆ ನಡೆದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿ ಸರ್ಕಾರವನ್ನು ಸುಭದ್ರಗೊಳಿಸುತ್ತಿದ್ದಂತೆ ಹಲವರು ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ನಿರಾಸಕ್ತಿ ವ್ಯಕ್ತಪಡಿಸುತ್ತಿದ್ದಾರೆ.

Advertisement

ಮುಂದಿನ ಮೂರು ವರ್ಷಗಳ ಕಾಲ ಬಿಜೆಪಿ ಸರ್ಕಾರ ಇರುವ ಹಿನ್ನೆಲೆಯಲ್ಲಿ ಯಾವುದಾದರೂ ಕೆಲಸಗಳನ್ನು ಮಾಡಿಸಿಕೊಳ್ಳುವ ತವಕದಲ್ಲಿದ್ದಾರೆ. ಹಾಗಾಗಿ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಆಸಕ್ತಿ ತೋರಿಸುತ್ತಿಲ್ಲ ಎಂಬ ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next