ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪೋಲಾಗುತ್ತಿರುವ ನೀರನ್ನು ಉಳಿಸಬೇಕು. ಸರ್ಕಾರದ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಅವರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆಯು ನಗರದ ವ್ಯಾಪಾರ, ವಾಣಿಜ್ಯ ಮಳಿಗೆಗಳಾದ ಹೋಟೆಲ್, ಲಾಡ್ಜ್ಗಳಿಗೆ, ವಾಹನ ಸರ್ವಿಸ್ ಸೆಂಟರ್
ಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಹೊಸದಾಗಿ ನಿರ್ಮಾಣ ಮಾಡುವ ಮನೆಗಳಿಗೆ ಮತ್ತು ಅಪಾರ್ಟ್ ಮೆಂಟ್‌ಗಳಿಗೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಸೆಳೆದರೂ ಯಾವುದೇ ಕ್ರಮವಿಲ್ಲ. ಪಾಲಿಕೆ ಸಿಬ್ಬಂದಿ ತಮಗೆ ಬೇಕಿರುವ ವ್ಯಕ್ತಿಗಳಿಗೆ, ಮಾಲೀಕರಿಗೆ ಕುಡಿವ ನೀರನ್ನು ಬೇರೆ ಉದ್ದೇಶಕ್ಕಾಗಿ ನೀಡುವುದು ಸಾಮಾನ್ಯವಾಗಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಲು ಮುಂದಾಗಬೇಕು ಎಂದವರು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಅಲ್ಲೀಪುರ ಕೆರೆಯ ಕುಡಿವ ನೀರನ್ನು ಬಳ್ಳಾರಿ ನಗರ ನಿವಾಸಿಗಳಿಗೆ ಕನಿಷ್ಠ 8 ದಿನಕ್ಕೊಮ್ಮೆ ಸರಬರಾಜು ಮಾಡಬೇಕು. ಮನಬಂದಂತೆ ನೀರನ್ನು ಸರಬರಾಜು ಮಾಡಿದರೇ ನೀರು ವ್ಯರ್ಥವಾಗಲಿದೆ. ನಿಗದಿತ ಅವಧಿ, ನಿಗದಿ ತ ದಿನದಂದೇ ನೀರನ್ನು ಸರಬರಾಜು ಮಾಡಲು ಮುಂದಾದರೆ ಎಲ್ಲರಿಗೂ ನೀರು ತಲುಪಿಸಿದಂತಾಗಲಿದೆ ಎಂದು ಅಧಿಕಾರಿಗಳ ಗಮನಸೆಳೆದರು.
ಮಹಾನಗರ ಪಾಲಿಕೆಯ ಪರವಾನಗಿ ಪಡೆಯದೇ ಖಾಸಗೀ ಟ್ರ್ಯಾಕ್ಟರ್‌ಗಳ ಮೂಲಕ ನೀರು ಸರಬರಾಜು ಮಾಡುವ ವಹಿವಾಟು ನಡೆದಿದೆ. ಇದು ಅಧಿಕಾರಿಗಳ ಗಮನಕ್ಕಿದ್ದರೂ ಸಂಬಂಧವಿಲ್ಲ ಇಲ್ಲ ಎನ್ನುವಂತೆ ಕಂಡರೂ ಕಾಣದಂತೆ ಇದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು. ನೀರಿನ ವಹಿವಾಟು ಮಾಡುವ ಟ್ರ್ಯಾಕ್ಟರ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ವಾಹನಗಳನ್ನು ವಶಕ್ಕೆ ಪಡೆಯಬೇಕು. ವಾಹನಗಳ ಮೂಲಕ ನೀರಿನ ವ್ಯಾಪಾರ ಮಾಡುವ ಪ್ರತಿಯೊಬ್ಬರು ಪಾಲಿಕೆವತಿಯಿಂದ ಪರವಾನಗಿ ಪಡೆಯುವುದು ಕಡ್ಡಾಯಗೊಳಿಸಬೇಕು.
ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ನಂತರ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮೇಕಲ ಈಶ್ವರ ರೆಡ್ಡಿ, ಎಸ್. ಕೃಷ್ಣ, ಜಿ.ಎಂ.ಬಾಷಾ, ಸಲ್ಲಾವುದ್ದೀನ್, ಎಂ.ಕೆ.ಜಗನ್ನಾಥ್, ಪಿ.ನಾರಾಯಣ, ಶಿವಾನಂದ್, ತೇಜು ಪಾಟೀಲ್, ಕೆ.ವೆಂಕಟೇಶ, ಎಂ.ಅಭಿಷೇಕ್ ಸೇರಿದಂತೆ ಇತರರಿದ್ದರು.