Advertisement
ಪಾಲಿಕೆ ಸದಸ್ಯರ ಅಧಿ ಕಾರಾವಧಿ ಮುಗಿದು ಒಂದು ವರ್ಷ ಕಳೆದರೂ ಚುನಾವಣೆ ಘೋಷಣೆಯಾಗಿಲ್ಲ. ಈ ಮೊದಲು ವಾರ್ಡ್‌ಗಳ ಮೀಸಲಾತಿ ಬದಲಾವಣೆಗಾಗಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಆದರೆ, ಎನ್ ಆರ್‌ಸಿ, ಸಿಎಎ ಬೆಂಬಲಿಸಿ ನಡೆದ ಸಮಾವೇಶದಲ್ಲಿ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಮಾಡಿದ ಪ್ರಚೋದನಾಕಾರಿ ಭಾಷಣದಿಂದ ನಗರದಲ್ಲಿ ಬಿಜೆಪಿಗೆ ಪ್ರತಿಕೂಲ ಪರಿಣಾಮ ಏರ್ಪಟ್ಟಿದೆ.
Related Articles
ಚುನಾವಣೆಯಲ್ಲಿ 26 ಕಾಂಗ್ರೆಸ್, 6 ಬಿಎಸ್‌ಆರ್, 1 ಜೆಡಿಎಸ್, 2 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಆಗಲೂ ಸಹ ಮೇಯರ್ ಸ್ಥಾನದ ಮೀಸಲಾತಿ ಬದಲಾವಣೆಗಾಗಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಆಗಲೂ ಪಾಲಿಕೆಗೆ ಚುನಾವಣೆ ನಡೆದು ವರ್ಷದ ಬಳಿಕ ಮೇಯರ್ ಆಯ್ಕೆ ಮಾಡಲು ಅವಕಾಶ ಲಭಿಸಿತ್ತು. ಪಾಲಿಕೆಗೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಚುನಾವಣೆ, ಸದಸ್ಯರ ಅವಧಿ ಮುಗಿದು ಒಂದು ವರ್ಷವಾದರೂ ಚುನಾವಣೆ ಘೋಷಣೆಯಾಗದಿರುವುದು ಸ್ಪರ್ಧಾಕಾಂಕ್ಷಿಗಳು, ಮತದಾರರಲ್ಲಿ ಬೇಸರ ಮೂಡಿಸಿದೆ.
Advertisement
ನಾಲ್ಕು ವಾರ್ಡ್‌ಗಳು ಹೆಚ್ಚಳ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಈ ಮೊದಲು 35 ಇದ್ದ ವಾರ್ಡ್‌ಗಳ ಸಂಖ್ಯೆಯನ್ನು 39ಕ್ಕೆ ಹೆಚ್ಚಿಸಲಾಗಿದೆ. ಕೆಲವೊಂದು ವಾರ್ಡ್ಗಳನ್ನು ವಿಭಜಿಸಿ ಹೆಚ್ಚುವರಿಯಾಗಿ ನಾಲ್ಕು ವಾರ್ಡ್ಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದ್ದು, 39 ವಾರ್ಡ್ ಗಳಿಗೂ ಮೀಸಲಾತಿಯನ್ನು ಸಹ ಪ್ರಕಟಿಸಲಾಗಿದೆ.
ಮೀಸಲಾತಿ ಬದಲಿಗಾಗಿ ಕೋರ್ಟ್ ಮೊರೆ: ಈ ಹಿಂದೆ ಇದ್ದ 22ನೇ ವಾರ್ಡ್ 23ನೇ ವಾರ್ಡ್ ಆಗಿ ಬದಲಾವಣೆಯಾಗಿದ್ದು, ಈ ವಾರ್ಡ್‌ನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಪಾಲಿಕೆ ಅಧಿಕಾರಿಗಳು ಪ್ರಕಟಿಸಿದ್ದರು. ಆದರೆ, ಕೆಲವರು ತಮ್ಮ ಅನುಕೂಲಕ್ಕಾಗಿ ನಿಗದಿತ ಅವಧಿ ಯಲ್ಲಿ ಆಕ್ಷೇಪಣೆ ಸಲ್ಲಿಸಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಈ ವಾರ್ಡ್‌ನ್ನು ಓಬಿಸಿ (ಎ) ಗೆ ಬದಲಾಯಿಸಿಕೊಂಡಿದ್ದಾರೆ. ಈ ವಾರ್ಡ್‌ನಲ್ಲಿ ದಲಿತರು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಮೇಲಾಗಿ ಕಳೆದ ಎರಡ್ಮೂರು ದಶಕಗಳಿಂದ ಪರಿಶಿಷ್ಟ ಜಾತಿಗೆ ಮೀಸಲಾಗದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ನೀಡಬೇಕು ಎಂದು ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. 1, 5ನೇ ವಾರ್ಡ್ ಮೀಸಲಾತಿಯನ್ನು ಬದಲಾವಣೆ ಮಾಡಬೇಕು ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಕಳೆದ ಒಂದು ವರ್ಷದಿಂದ ನ್ಯಾಯಾಲಯದಲ್ಲಿದ್ದರೂ, ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಚುನಾವಣೆ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತಿಲ್ಲ.
ಸಮಸ್ಯೆಗಳ ಕೇಳುವವರಿಲ್ಲ: ಪಾಲಿಕೆ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ. ನಗರದ ಬಹುತೇಕ ಕಡೆ ಒಳಚರಂಡಿ ಸೋರಿಕೆ ಹೆಚ್ಚುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲೀಪುರ, ಮೋಕಾ ಕೆರೆಯಲ್ಲಿ ಸಮರ್ಪಕವಾಗಿ ಕುಡಿವ ನೀರು ಇದ್ದರೂ 10 ದಿನಕ್ಕೊಮ್ಮೆ ಸರಬರಾಜು ಮಾಡುವ ಪದ್ಧತಿ ಬದಲಾವಣೆಯಾಗುತ್ತಿಲ್ಲ ಎಂದು ಜನರು ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ವೆಂಕೋಬಿ ಸಂಗನಕಲ್ಲು