Advertisement

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

01:04 PM Feb 01, 2020 | Naveen |

ಬಳ್ಳಾರಿ: ಬ್ಯಾಂಕ್‌ಗಳ ಉದ್ಯೋಗಿ ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಭಾರತೀಯ ಬ್ಯಾಂಕ್‌ಗಳ ಸಂಘ (ಯುಎಫ್‌ಬಿಯು)ದಿಂದ ಜ. 31ರಿಂದ ಎರಡು ದಿನಗಳ ಕಾಲ ಬ್ಯಾಂಕ್‌ಗಳನ್ನು ಬಂದ್‌ ಮಾಡಿ ನಗರದ ಎಸ್‌ಬಿಐ ಮುಖ್ಯಶಾಖೆ, ತಾಲೂಕು ಕಚೇರಿ ಪಕ್ಕದ ಎಸ್‌ಬಿಐ ಶಾಖೆ ಎದುರು ಶುಕ್ರವಾರ ನಗರದ ಪ್ರತಿಭಟನೆ ನಡೆಸಿದರು.

Advertisement

ದ್ವಿಪಕ್ಷೀಯ ಒಪ್ಪಂದಗಳಿಂದ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳ ವೇತನ ಮತ್ತು ಸೇವಾ ಪರಿಸ್ಥಿತಿಗಳನ್ನು ನಿಯಂತ್ರಿಸಲಾಗುತ್ತಿದೆ. ಯೂನಿಯನ್‌ಗಳು ಸಲ್ಲಿಸಿದ ಬೇಡಿಕೆಗಳ ಆಧಾರದ ಮೇಲೆ ಮತ್ತು ಎಲ್ಲ ಸದಸ್ಯ ಬ್ಯಾಂಕ್‌ಗಳ ಪರವಾರಿ ಭಾರತೀಯ ಬ್ಯಾಂಕ್‌ ಗಳ ಸಂಘದೊಂದಿಗೆ ಚರ್ಚೆಯಿಂದ ಉದ್ಭವಿಸುವ 5 ವರ್ಷಗಳಿಗೊಮ್ಮೆ ಇದನ್ನು ಪರಿಷ್ಕರಿಸಲಾಗುತ್ತಿದೆ. ಅದರಂತೆ ಕೊನೆಯ ಸೆಟಿಲ್‌ಮೆಂಟ್‌ನ್ನು 2012 ರಿಂದ 2017ರ
ವರೆಗೆ ಅಂತಿಮಗೊಳಿಸಲಾಗಿತ್ತು. ಆದರೆ, 2017 ನವೆಂಬರ್‌ ತಿಂಗಳಿಂದ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನು ಈವರೆಗೂ ಮಾಡಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಕ್ರಮಕೈಗೊಂಡು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.

ಮುಷ್ಕರ ಹಿನ್ನೆಲೆಯಲ್ಲಿ ಜ.27 ರಂದು ದೆಹಲಿಯಲ್ಲಿ ಮುಖ್ಯ ಕಾರ್ಮಿಕ ಆಯುಕ್ತರು, ಕಾರ್ಮಿಕ ಸಚಿವಾಲಯ, ಕೇಂದ್ರ ಸರ್ಕಾರ ಸಹಯೋಗದಲ್ಲಿ ರಾಜಿಸಂಧಾನಕ್ಕೆ ಕರೆಯಲಾಗಿತ್ತು. ಸಂಧಾನ ಸಭೆಯಲ್ಲಿ ಐಬಿಎ ಅಧಿಕಾರಿಗಳ ವರ್ತನೆ ಕಠಿಣವಾಗಿತ್ತು. ಪರಿಣಾಮ ಬ್ಯಾಂಕ್‌ ಅಧಿಕಾರಿ ಮತ್ತು ಉದ್ಯೋಗಿಗಳ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಜ. 31 ಮತ್ತು ಫೆ.1 ರಂದು ಎರಡು
ದಿನಗಳ ಕಾಲ ಬ್ಯಾಂಕ್‌ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾನಿರತರು ತಿಳಿಸಿದ್ದಾರೆ.

ಬ್ಯಾಂಕಿಂಗ್‌ ಉದ್ಯೋಗಿಗಳ ಮತ್ತು ಅಧಿಕಾರಿಗಳ ವೇತನವನ್ನು ಪರಿಷ್ಕರಣೆ ಮಾಡಬೇಕು. ವಾರದಲ್ಲಿ 5 ದಿನಕ್ಕೆ ಬ್ಯಾಂಕ್‌ ಸೇವೆಯನ್ನು ಸೀಮಿತಗೊಳಿಸಬೇಕು. ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯನ್ನು ರದ್ದುಗೊಳಿಸಬೇಕು. ಮೂಲಭತ್ಯೆಯೊಂದಿಗೆ ವಿಶೇಷ ಭತ್ಯೆಯನ್ನು ವಿಲೀನಗೊಳಿಸಬೇಕು. ಕುಟುಂಬ ಪಿಂಚಣಿಯಲ್ಲಿ ಸುಧಾರಣೆ ತರಬೇಕು. ಗುತ್ತಿಗೆ ನೌಕರರು, ವ್ಯವಹಾರ ವರದಿಗಾರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ನಗರದ ವಿವಿಧ ಬ್ಯಾಂಕ್‌ ಗಳ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ ನೌಕರರ ಸೇರಿದಂತೆ ನೂರಾರು ಜನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next