ಬಳ್ಳಾರಿ/ ಬಾಗಲಕೋಟೆ: ರಾಜ್ಯ ವಿಷ ಪ್ರಸಾದ ದುರಂತದ ಕಹಿ ನೆನಪಿನಿಂದ ಹೊರ ಬರಲು ಯತ್ನಿಸುತ್ತಿರುವ ವೇಳೆಯಲ್ಲೇ ಬಳ್ಳಾರಿ ಮತ್ತು ಬಾಗಲಕೋಟೆಯಲ್ಲಿ ಒಂದೇ ದಿನ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಹಲ್ಲಿ ಬಿದ್ದು 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಸಿರಗುಪ್ಪದಲ್ಲಿ 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಸಿರಗುಪ್ಪ ತಾಲೂಕಿನ ಹಾಗಲೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ಗುರುವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.
ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪರಿಣಾಮ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದ್ದು, ವಾಂತಿ ಮತ್ತು ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದಾರೆ ಎಂದು ತಿಳಿದಿದ್ದಾರೆ.
ಕರೂರು ಆಸ್ಪತ್ರೆಯಲ್ಲಿ ಅಸ್ವಸ್ಥ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇಬ್ಬರು ದಾದಿಯರು ಮಾತ್ರ ವೈದ್ಯಕೀಯ ಕೇಂದ್ರದಲ್ಲಿದ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಮೂಲಗಳ ಪ್ರಕಾರ ವಿದ್ಯಾರ್ಥಿಗಳಿಗೆ ಪ್ರಾಣಾಪಾಯ ಇಲ್ಲ ಎಂದು ತಿಳಿದು ಬಂದಿದೆ.
ಹುನಗುಂದದಲ್ಲಿ 40 ಮಕ್ಕಳು ಅಸ್ವಸ್ಥ
ಬಾಗಲಕೋಟೆ : ಹುನಗುಂದ ಚಿಕ್ಕ ಮಾಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೂ ಬಿಸಿಯೂಟದ ಸಾಂಬಾರಿನಲ್ಲಿ ಹಲ್ಲಿ ಬಿದ್ದ ಪರಿಣಾಮ 40 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥ ವಿದ್ಯಾರ್ಥಿಗಳಿಗೆ ಕಮತಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹನೂರಿನ ವಿಷಪ್ರಸಾದ ದುರಂತ ಕಣ್ಣೆದುರು ಇರುವ ವೇಳೆಯಲ್ಲೇ ಮಕ್ಕಳ ಪೋಷಕರು ಈ ಘಟನೆಯಿಂದ ಕಂಗಾಲಾಗಿ ಹೋಗಿದ್ದಾರೆ.