ಬಳ್ಳಾರಿ: ಕೋವಿಡ್ ವೈರಸ್ ನಿಯಂತ್ರಿಸುವಲ್ಲಿ ಫ್ರಂಟ್‌ಲೈನ್ ವಾರಿಯರ್ಸ್‌ನಂತೆ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳನ್ನು ಖಂಡಿಸಿ, ಸೂಕ್ತ ರಕ್ಷಣೆಗೆ ಆಗ್ರಹಿಸಿ ಮತ್ತು ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ “ಆಶಾ ಸಂರಕ್ಷಣಾ ದಿನ’ದ ಅಂಗವಾಗಿ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದ ಡಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕೋವಿಡ್ ವೈರಸ್, ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಗಳಲ್ಲೇ ಇರಬೇಕಿದ್ದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗುತೊರೆದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ರಾಜ್ಯಾದ್ಯಂತ ಕಳೆದ 2 ತಿಂಗಳಿಂದ ಅವಿರತ ಸೇವೆಯಲ್ಲಿರುವ “ಫ್ರಂಟ್ ಲೈನ್ ವಾರಿಯರ್’ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳು ದಿನದಿಂದ ದಿನ ಹೆಚ್ಚಾಗುತ್ತಿರುವುದು, ಆಶಾ ಸಮುದಾಯಕ್ಕೆ ತುಂಬಾ ಭಯ-ಆತಂಕವನ್ನು ಉಂಟು ಮಾಡಿದೆ. ಕೋವಿಡ್ ವೈರಸ್ ತಡೆಗೆ ಪ್ರತಿ ದಿನ ಮನೆ-ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರು ಕೆಲ ಪುಂಡರ ಮತ್ತು ಪಾನಮತ್ತರ ಕೆಂಗಣ್ಣಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 29ರಂದು “ಆಶಾ ಸಂರಕ್ಷಣಾ ದಿನ’ವೆಂದು ಘೋಷಿಸಿ ರಾಜ್ಯ ವ್ಯಾಪಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಹಲ್ಲೆಗೊಳಗಾದ ಆಶಾ ಕುಟುಂಬದ ಸದಸ್ಯರು ಲಾಕ್ ಡೌನ್‌ನಿಂದಾಗಿ ಕೆಲಸ, ಆದಾಯ ಎರಡೂ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಇವರ ಗೌರವಧನದಿಂದ ಸಂಸಾರ ನಡೆಸುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ಹಗಲು-ಇರುಳು ಇಲಾಖೆ ಕೆಲಸಕ್ಕೆ ಕೈಜೋಡಿಸಿರುವ ಇವರಿಗೆ ಮಾರ್ಚ್ ತಿಂಗಳಿಂದ ಕೋವಿಡ್-19 ಕಾರ್ಯ ನಿಯೋಜನೆ ಮುಗಿಯುವವರೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು. ಕೋವಿಡ್ -19 ಸೇವೆಯಲ್ಲಿರುವಾಗ ರಾಜ್ಯದಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 50 ಲಕ್ಷ ರೂ. ವಿಮೆ ಸೌಲಭ್ಯವನ್ನು ನೀಡುವ ಬಗ್ಗೆ ಖಾತರಿ ಪಡಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾಡಳಿತದ ಮೂಲಕ ಸಿಎಂ ಯಡಿಯೂರಪ್ಪರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಲಕ್ಷ್ಮೀ, ಎ.ದೇವದಾಸ್, ಎ.ಶಾಂತಾ, ಗೀತಾ, ರಾಮಕ್ಕ ಸೇರಿ ಹಲವಾರು ಆಶಾ ಕಾರ್ಯಕರ್ತೆಯರು ಇದ್ದರು.