ಬಳ್ಳಾರಿ: ಕೆಲವು ದಿನಗಳ ಹಿಂದೆ ಎನ್‌ಐಎ ದಾಳಿಯ ವೇಳೆ ಬಂಧಿತರಾಗಿರುವ ಇಬ್ಬರು ಆರೋಪಿಗಳು ನಗರದ ರಸಗೊಬ್ಬರ ಮಳಿಗೆಯಿಂದ ಅಮೋನಿಯಂ ನೈಟ್ರೇಟ್ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ನಿಷೇಧಿ ತ ಪಿಎಫ್‌ಐ, ಐಸಿಸ್ ಉಗ್ರ ಸಂಘಟನೆಗಳ ಜತೆಗೆ ಸಂಪರ್ಕ ಹೊಂದಿದ್ದಾರೆಂಬ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಡಿ. 18ರಂದು ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ತಲಾ ಇಬ್ಬರಂತೆ ಬಳ್ಳಾರಿ ಮೂಲದ ಒಟ್ಟು ನಾಲ್ವರನ್ನು ಬಂಧಿಸಿದ್ದರು. ಈ ಪೈಕಿ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಮೊಹಮ್ಮದ್ ಸುಲೇಮಾನ್ ಹಾಗೂ ಬಳ್ಳಾರಿಯಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದ ಸೈಯದ್ ಸಮೀರ್ ಪ್ರಮುಖ ಆರೋಪಿಗಳಾಗಿದ್ದು, ಅವರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿರುವುದು ತಿಳಿದುಬಂದಿದೆ.
ಸುಲೇಮಾನ್ ಮತ್ತು ಸಮೀರ್ ಅ. 22ರಂದು ಬಳ್ಳಾರಿಯ ರಸಗೊಬ್ಬರ ಮಳಿಗೆಯೊಂದರಲ್ಲಿ ಒಂದು ಕೆ.ಜಿ. ಅಮೋನಿಯಂ ನೈಟ್ರೇಟ್ ಖರೀದಿ ಮಾಡಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅದನ್ನು ಬಳಸಿ ಇಲ್ಲಿಯೇ ಪ್ರಾಯೋಗಿಕವಾಗಿ ಸ್ಫೋಟಕ ತಯಾರಿಸಲು ಸಂಚು ರೂಪಿಸಿದ್ದರೇ ಎಂಬ ಅನುಮಾನ ತನಿಖಾ ಧಿಕಾರಿಗಳನ್ನು ಕಾಡುತ್ತಿದೆ. ಆದರೆ ಮಳಿಗೆಯಲ್ಲಿ ಆ ದಿನಾಂಕದ ಯಾವುದೇ ಬಿಲ್ ಮತ್ತು ಇವರು ಭೇಟಿ ನೀಡಿದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಸಮೀರ್ ಕಾಲೇಜು ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯಲು ಮುಂದಾಗಿದ್ದ ಎನ್ನಲಾಗಿದೆ. ಯುವಕರನ್ನು ಬ್ರೈನ್‌ವಾಶ್ ಮಾಡಿ, ಅವರನ್ನು ನಿಷೇ ಧಿತ ಐಸಿಸ್ ಸಂಘಟನೆಗೆ ಸೆಳೆಯಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.
-ವೆಂಕೋಬಿ ಸಂಗನಕಲ್ಲು