ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗುತ್ತಿದ್ದಂತೆ ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಬಿಜೆಪಿ ಆಡಳಿತಕ್ಕೆ ಬರಲು ಪ್ರಮುಖ ಪಾತ್ರ ವಹಿಸಿರುವ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿಯೂ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಈ ಹಿಂದಿನಂತೆ ಮೂರು ಸಚಿವ ಸ್ಥಾನಗಳು ಲಭಿಸಲಿವೆಯೇ? ಯಾರ್ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ಕುತೂಹಲ ಮೂಡಿದೆ.
ರಾಜ್ಯ ವಿಧಾನಸಭೆಗೆ 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 110 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಕೇವಲ ಮೂರು ಶಾಸಕರ ಕೊರತೆಯಿತ್ತು. ಆಗ 6 ಪಕ್ಷೇತರ ಶಾಸಕರ ಬೆಂಬಲವನ್ನು ಬಿಜೆಪಿಗೆ ಕೊಡಿಸುವಲ್ಲಿ ಗಣಿಧಣಿಗಳಾದ ರೆಡ್ಡಿ ಸಹೋದರರು ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಕರುಣಾಕರ ರೆಡ್ಡಿ, ವಿಧಾನಪರಿಷತ್ ಸದಸ್ಯರಾಗಿದ್ದ ಜಿ. ಜನಾರ್ದನರೆಡ್ಡಿ, ಇವರ ಆಪ್ತ ಬಿ. ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಅಲ್ಲದೆ ಬಳ್ಳಾರಿ ನಗರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿ ಅವರಿಗೆ ಕೆಎಂಎಫ್ ರಾಜ್ಯ ಮಹಾಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದರಿಂದ ರಾಜ್ಯದಲ್ಲೇ ರೆಡ್ಡಿ ಸಹೋದರರು ಅತ್ಯಂತ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಬದಲಾದ ರಾಜಕೀಯ ವಿದ್ಯಮಾನಗಳಿಂದಾಗಿ ರೆಡ್ಡಿ ಸಹೋದರರ ಹವಾ ಒಂದಷ್ಟು ಕಡಿಮೆಯಾಗಿದೆ. ಹೀಗಾಗಿ ಮೈತ್ರಿ ಸರ್ಕಾರ ಪತನದಿಂದಾಗಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ ಸರ್ಕಾರದಲ್ಲಿ ಈ ಹಿಂದಿನಂತೆ ಈ ಬಾರಿಯೂ ನಿರೀಕ್ಷಿತ ಸಚಿವ ಸ್ಥಾನಗಳು ಜಿಲ್ಲೆಗೆ ಲಭಿಸಲಿವೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
ಗೆದ್ದವರೆಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳು: ಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಸಿರುಗುಪ್ಪ, ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಜಿಲ್ಲೆಯ ಪ್ರಭಾವಿ ಮುಖಂಡ ಬಿ. ಶ್ರೀರಾಮುಲು ಅವರು ಪಕ್ಕದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೂ ಜಿಲ್ಲೆಯ ಮೇಲೆ ಇವರ ಹಿಡಿತ ಸಡಿಲಗೊಂಡಿಲ್ಲ. ಹೀಗಾಗಿ ಚಿತ್ರದುರ್ಗ ಜಿಲ್ಲೆಯ ಕೋಟಾ ಅಥವಾ ಜಾತಿ ಲೆಕ್ಕಾಚಾರದಲ್ಲಾದರೂ ಸಚಿವ ಸ್ಥಾನ ಲಭಿಸೋದು ಪಕ್ಕಾ ಎನ್ನಲಾಗುತ್ತಿದೆ.
ಇನ್ನು ಜಿಲ್ಲೆಯ ಸಿರುಗುಪ್ಪ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಂ.ಎಸ್.ಸೋಮಲಿಂಗಪ್ಪ, ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರೂ ಜಾತಿ ಲೆಕ್ಕಾಚಾರದಲ್ಲಿ ದೊರೆಯುವುದು ಅನುಮಾನ ಎನ್ನಲಾಗುತ್ತಿದೆ. ವಾಲ್ಮೀಕಿ ಸಮುದಾಯದಲ್ಲೇ ಪ್ರಭಾವಿ ಮುಖಂಡರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ರಾಜುಗೌಡ ಅವರು ಸಚಿವ ಸ್ಥಾನದ ರೇಸ್‌ನಲ್ಲಿರುವುದರಿಂದ ಸೋಮಲಿಂಗಪ್ಪ ಹಾಗೂ ಎನ್.ವೈ. ಗೋಪಾಲಕೃಷ್ಣ ಅವರ ಆಸೆ ಈಡೇರುವುದು ಕಷ್ಟ ಎಂಬ ಚರ್ಚೆಗಳು ನಡೆಯುತ್ತಿವೆ.
ಕರುಣಾಕಾರ ರೆಡ್ಡಿಗೆ ಸ್ಥಾನ?: ಈ ಮೊದಲು ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ಕ್ಷೇತ್ರ ಇತ್ತೀಚೆಗಷ್ಟೇ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದೆ. ಅಲ್ಲಿನ ಶಾಸಕ ಜಿ. ಕರುಣಾಕರೆಡ್ಡಿ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಈ ಮೊದಲು ಬಿಜೆಪಿಯಲ್ಲಿ ರೆಡ್ಡಿ ಸಹೋದರರು ತಮ್ಮದೇ ಆದ ಹಿಡಿತ ಸಾಧಿಸಿದ್ದರು. ಪರಿಣಾಮ ಆಗ ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಕರುಣಾಕರರೆಡ್ಡಿಯವರು ಕಂದಾಯ ಸಚಿವರಾಗಿದ್ದರು. ಇದೀಗ ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಬರುವುದರಿಂದ ಜಿಲ್ಲೆಯಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಮೇಲಾಗಿ ಪಕ್ಷದಲ್ಲೂ ರೆಡ್ಡಿ ಸಹೋದರರ ಪ್ರಭಾವವೂ ಒಂದಷ್ಟು ಕುಸಿದಿದೆ. 2008ರಲ್ಲಿ ಶಾಸಕರಾಗಿ, ಕೆಎಂಎಫ್ ರಾಜ್ಯಾಧ್ಯಕ್ಷರಾಗಿದ್ದ ಶಾಸಕ ಜಿ. ಸೋಮಶೇಖರರೆಡ್ಡಿ ಅವರು 2013ರಲ್ಲಿ ಸೋಲಿನ ಭೀತಿಯಿಂದಾಗಿ ಚುನಾವಣೆಯಿಂದಲೇ ದೂರ ಉಳಿದಿದ್ದರು. ಹೀಗಾಗಿ ಇವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಸಚಿವ ಸ್ಥಾನಕ್ಕಾಗಿಯೇ ಬಿಜೆಪಿಗೆ ಬಂದ ಆನಂದ್ ಸಿಂಗ್
ಸತತ ಮೂರನೇ ಬಾರಿಗೆ ಜಯಗಳಿಸಿರುವ ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್. ಆನಂದ್‌ಸಿಂಗ್ ಅವರು ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದಿದ್ದು, ಮತ್ತೆ ಮಾತೃ ಪಕ್ಷ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಆನಂದ್‌ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಿದರೆ, ರೆಡ್ಡಿ ಸಹೋದರರಿಗೆ ಹೊಸ ಸಂಪುಟದಲ್ಲಿ ಸ್ಥಾನ ದೊರೆಯುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.