Advertisement

ಮೂಲವಿನ್ಯಾಸದಂತೆ ಕಾಲುವೆ ನಿರ್ಮಿಸದಿದ್ದರೆ ಹೋರಾಟ

04:21 PM Jun 24, 2019 | Team Udayavani |

ಬಳ್ಳಾರಿ: ತುಂಗಭದ್ರಾ ಬಲದಂಡೆ ಕೆಳಮಟ್ಟದ (ಎಲ್ಎಲ್ಸಿ) ಕಾಲುವೆಯ ಆಧುನೀಕರಣವನ್ನು ಮೂಲ ವಿನ್ಯಾಸದಂತೆ ಮಾಡದಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡ ಸ್ವಾಮಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಆರ್‌.ಮಾಧವರೆಡ್ಡಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಬಲದಂಡೆಯ ಎಲ್ಎಲ್ಸಿ ಕಾಲುವೆ ಈ ಮೊದಲು 15 ಮೀಟರ್‌ ಅಗಲ, 8.5 ಮೀಟರ್‌ ಎತ್ತರದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿತ್ತು. ಆದರೆ, ಈ ಕಾಲುವೆಯನ್ನು ಆಧುನೀಕರಣದ ಹೆಸರಿನಲ್ಲಿ ಹಳೆಯ ವಿನ್ಯಾಸವನ್ನೇ ಬದಲಿಸಲಾಗುತ್ತಿದೆ. 15 ಮೀಟರ್‌ ಇದ್ದ ಕಾಲುವೆಯನ್ನು 21 ಮೀಟರ್‌ಗೆ ಅಗಲವಾಗಿ ನಿರ್ಮಿಸಿ, ನೆರೆಯ ಆಂಧ್ರಪ್ರದೇಶಕ್ಕೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇದೀಗ ಹೊಸ ವಿನ್ಯಾಸದಂತೆ ನಿರ್ಮಿಸಲಾಗುತ್ತಿರುವ ಎಲ್ಎಲ್ಸಿ ಕಾಲುವೆಯಲ್ಲಿ ನೀರು ರಾಜ್ಯದ ರೈತರಿಗೆ ಸರಿಯಾಗಿ ಸಿಗದೆ, ಸರಳವಾಗಿ ಆಂಧ್ರಪ್ರದೇಶಕ್ಕೆ ಹರಿದುಹೋಗಲಿದೆ. ಇದನ್ನು ವಿರೋಧಿಸಿ ಸಿರುಗುಪ್ಪ ತಾಲೂಕು ಸಿರಿಗೇರಿ ಬಳಿ ಕಳೆದ 17 ದಿನಗಳು ರೈತರು ಪ್ರತಿಭಟನೆ ನಡೆಸಿದ ಬಳಿಕ ಸ್ಥಳಕ್ಕೆ ಆಗಮಿಸಿದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮುಖ್ಯ ಇಂಜಿನಿಯರ್‌ ಮಂಜಪ್ಪ, ಸ್ಥಳೀಯ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ದಾಖಲೆಗಳನ್ನು ನೀಡಿದರು. ಮೂಲ ವಿನ್ಯಾಸದಂತೆ ಕಾಲುವೆಯನ್ನು ಅಗಲೀಕರಣಗೊಳಿಸುವುದಾಗಿ ರೈತರ ಮನವೊಲಿಸಲು ಯತ್ನಿಸಿದರು. ಆದರೆ, ಸೂಕ್ತ ದಾಖಲೆಗಳನ್ನು ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು. ದಾಖಲೆಗಳಲ್ಲಿ ಉಲ್ಲೇಖೀಸಿದ ಮೂಲ ವಿನ್ಯಾಸದಂತೆಯೇ ಕಾಲುವೆಯನ್ನು ನಿರ್ಮಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಮಾಧವರೆಡ್ಡಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಲೇಪಾಕ್ಷಿ, ಹುಲುಗಯ್ಯ, ವಿಜಯಗೌಡ, ಬಸವರಾಜ ಸ್ವಾಮಿ, ಶೇಖರಪ್ಪ, ಮಂಜುನಾಥ ಸ್ವಾಮಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next