Advertisement

ಕ್ಷಯರೋಗ ತಡೆಗಟ್ಟಲು ಸಹಕಾರ ಅಗತ್ಯ

03:21 PM Jul 24, 2019 | Naveen |

ಬಳ್ಳಾರಿ: ಸಾಂಕ್ರಾಮಿಕ ರೋಗಗಳಲ್ಲಿ ಒಂದಾದ ಕ್ಷಯರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಕೇಂದ್ರ ಕಾರಾಗೃಹದ ಅಧಿಧೀಕ್ಷಕ ಮಲ್ಲಿಕಾರ್ಜುನ ಬಿ. ಸ್ವಾಮಿ ತಿಳಿಸಿದರು.

Advertisement

ನಗರದ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಪರಿಷ್ಕೃತ, ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಮ್ಮುವಾಗ, ಸೀನುವಾಗ ಕರ್ಚಿಪ್‌ ಅನ್ನು ಬಳಸುವುದರಿಂದ ಹಾಗೂ ಇತರೆ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದ ಅವರು, ಕಾರಗೃಹದಲ್ಲಿ ಇರುವ ಎಲ್ಲರೂ ತಮ್ಮ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವೈದ್ಯರು ನೀಡುವ ಔಷಧಗಳನ್ನು ಸರಿಯಾದ ರೀತಿಯಲ್ಲಿ ಸೇವಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡಬಹುದು ಎಂದು ವಿವರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಕೆ.ಜಿ. ವಿರೇಂದ್ರ ಕುಮಾರ ಮಾತನಾಡಿ, ‘ಕಾಲ ಬಂದಿದೆ, ಟಿಬಿ ಕೊನೆಗಾಣಿಸಲು’ ಎಂಬ ಘೋಷಣೆಯೊಂದಿಗೆ ಜುಲೈ 15ರಿಂದ 27ರವರೆಗೆ ಕ್ಷಯರೋಗವನ್ನು ಸಕ್ರಿಯವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ನಿರಂತರ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಬಹುದು ಎಂದರು.

ಮೈಕ್ಯೋಬ್ಯಾಕ್ಟೀರಿಯಂ ಟ್ಯೂಬರ್‌ ಕ್ಯುಲೋಸಿಸ್‌ ಎಂಬ ಸೂಕ್ಷ್ಮಾಣು ಜೀವಿಯಿಂದ ಹರಡುವ ಟಿಬಿಯು ಶ್ವಾಸಕೋಶದ ಕ್ಷಯ ಮತ್ತು ಶ್ವಾಸಕೋಶೇತರ ಕ್ಷಯ ಎಂಬ ಎರಡು ವಿಧಗಳಿಂದ ಕ್ಷಯರೋಗಿ ಕೆಮ್ಮಿದಾಗ, ಸೀನಿದಾಗ ಹೊರಬರುವ ತುಂತುರುಗಳಿಂದ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಕ್ಷಯರೋಗದ ಸೋಂಕು ಉಂಟುಮಾಡುತ್ತದೆ ಎಂದು ಸಂಕ್ಷಿಪ್ತವಾಗಿ ವಿವರಿಸಿದರು.

Advertisement

ಕ್ಷಯರೋಗ ಹರಡುವಿಕೆ: ಆಂದೋಲನದಲ್ಲಿ ರೋಗ ನಿರ್ಣಯಿಸಿದ ಎಲ್ಲ ಪ್ರಕರಣಗಳಿಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಒಮ್ಮೆ ಚಿಕಿತ್ಸೆಯನ್ನು ಆರಂಭಿಸಿದ ನಂತರ ಚಿಕಿತ್ಸೆಯನ್ನು ಅಪೂರ್ಣಗೊಳಿಸಬಾರದು. ಅರ್ಧದಲ್ಲಿ ಚಿಕಿತ್ಸೆಯನ್ನು ನಿಲ್ಲಿಸಬಾರದು. ಇದು ಎಂಡಿಆರ್‌ ಟಿಬಿಯಾಗಿ ಬದಲಾವಣೆಯಾಗಿ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುವುದಲ್ಲದೆ 2 ವರ್ಷಗಳ ಚಿಕಿತ್ಸೆಗೆ ಗುರಿಯಾಗಿಸುತ್ತದೆ. ಅಲ್ಲದೇ, ದೇಹದ ಇತರೆ ಭಾಗಗಳಿಂದಲೂ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪ ಮಾತನಾಡಿದರು. ನಗರ ಕ್ಷಯರೋಗ ಮೇಲ್ವಿಚಾರಕ ವಾಗೀಶ ಮಾತನಾಡಿ, ರಾಷ್ಟ್ರೀಯ ನಿಕ್ಷಯ ಪೋಷಣ ಅಡಿಯಲ್ಲಿ ಚಿಕಿತ್ಸಾ ಅವಧಿಯಲ್ಲಿ ರೋಗಿಗೆ ನೆರವಾಗುವ ದೃಷ್ಟಿಯಿಂದ ಚಿಕಿತ್ಸೆ ಪಡೆಯುವ ಪ್ರತಿ ಫಲಾನುಭವಿಗೆ ಮಾಸಿಕವಾಗಿ 500 ರೂ. ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾರಾಗೃಹ ಆಸ್ಪತ್ರೆ ವೈದ್ಯರಾದ ಡಾ| ಕೆ.ಎಸ್‌.ಆರ್‌. ಗುಪ್ತಾ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ವಿರೇಶ ಎಚ್, ಬಸವರಾಜ ರಾಜಗುರು, ರಾಮಾಂಜೀನೆಯ, ಗುಡದಯ್ಯ, ಚಂದ್ರು, ಜ್ಯೋತಿಲಕ್ಷ್ಮೀ, ಕಾರಗೃಹ ಸಿಬ್ಬಂದಿ ವರ್ಗದವರು ಮತ್ತು ಗಾಂಧಿನಗರದ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next