ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಕಳೆದ ಎರಡು ವರ್ಷಗಳಿಂದ ಚಿಲ್ಲರೆ ವ್ಯಾಪಾರಿಗಳಿಲ್ಲದೇ ಭಣಗುಡುತ್ತಿದ್ದ ತರಕಾರಿ ಚಿಲ್ಲರೆ ವ್ಯಾಪಾರಿಗಳ ‘ಭಾನುವಾರದ ಸಂತೆ ಮಾರುಕಟ್ಟೆ’ ಇದೀಗ ವ್ಯಾಪಾರಿಗಳು ಮತ್ತು ಗ್ರಾಹಕರಿಂದ ಕಂಗೊಳಿಸುತ್ತಿದ್ದು, ಜಿಲ್ಲಾಧಿಕಾರಿಗಳ ಸೂಚನೆ, ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರ ಮಧ್ಯಸ್ಥಿಕೆ ಕೊನೆಗೂ ಯಶಸ್ವಿಯಾಗಿದೆ.
ನಗರದ ಎಪಿಎಂಸಿ ಆವರಣದಲ್ಲಿ ಸಗಟು ವ್ಯಾಪಾರಿಗಳೊಂದಿಗೆ ತರಕಾರಿ ಮಾರಾಟದಲ್ಲಿ ತೊಡಗುತ್ತಿದ್ದ ಚಿಲ್ಲರೆ ವ್ಯಾಪಾರಿಗಳಿಗಾಗಿ ಪಕ್ಕದಲ್ಲೇ 3 ಕೋಟಿ ರೂ. ವೆಚ್ಚದಲ್ಲಿ ‘ಭಾನುವಾರದ ಸಂತೆ ಮಾರುಕಟ್ಟೆ’ ಪ್ರಾಂಗಣ ನಿರ್ಮಿಸಿತ್ತು. ಇದರಲ್ಲಿ ರೈತರು ಬೆಳೆಯನ್ನು ಕಮಿಷನ್ ಏಜೆಂಟ್ರಿಗೆ ನೀಡದೆ, ಯಾರಿಗೂ ಶುಲ್ಕ ಪಾವತಿಸದೆ ಪ್ರತಿ ಭಾನುವಾರ ಸ್ವತಃ ತಾವೇ ‘ಭಾನುವಾರದ ಸಂತೆ ಮಾರುಕಟ್ಟೆ’ಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಮೇಲಾಗಿ ಬಿಸಿಲು, ಬಿರುಗಾಳಿ, ಮಳೆಯಿಂದಲೂ ರಕ್ಷಣೆ ಒದಗಿಸಲಾಗಿದೆ. ಚಿಲ್ಲರೆ ವ್ಯಾಪಾರಿಗಳಿಗೆ, ರೈತರಿಗೆ ಇಷ್ಟೆಲ್ಲ ಸೌಲಭ್ಯ ಕಲ್ಪಿಸಿದ್ದರೂ, ಈ ಮಾರುಕಟ್ಟೆಯನ್ನು ಯಾರೊಬ್ಬರೂ ಬಳಕೆಗೆ ಮುಂದಾಗಿರಲಿಲ್ಲ. ಕಳೆದ ಎರಡು ವರ್ಷಗಳಿಂದಲೂ ಬೀಗ ಹಾಕಲಾಗಿದ್ದ ಈ ಮಾರುಕಟ್ಟೆ ಕಳೆದ 8 ದಿನಗಳಿಂದ ಬಳಕೆಗೆ ಅಣಿಯಾಗಿದೆ. ಚಿಲ್ಲರೆ ವ್ಯಾಪಾರಿಗಳಲ್ಲಿ ಬಹುತೇಕರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದು, ಗ್ರಾಹಕರು ಸಹ ಸಹಕಾರ ನೀಡುತ್ತಿದ್ದಾರೆ.
ಚಿಲ್ಲರೆ-ಸಗಟು ವ್ಯಾಪಾರಿಗಳ ನಡುವೆ ಭಿನ್ನತೆ: ಭಾನುವಾರದ ಸಂತೆ ಮಾರುಕಟ್ಟೆ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಬಳಕೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಸಗಟು ವ್ಯಾಪಾರಿಗಳು ದಡೆ (3 ಕೆಜಿ) ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಚಿಲ್ಲರೆ ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಗಟು ವ್ಯಾಪಾರಿಗಳೇ ಚಿಲ್ಲರೆ ವ್ಯಾಪಾರ ಮಾಡುತ್ತಿರುವಾಗ ಗ್ರಾಹಕರಿಗೆ ಹೊರಗಡೆಯೇ ಎಲ್ಲವೂ ದೊರೆಯಲಿದೆ. ಭಾನುವಾರದ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿನ ಚಿಲ್ಲರೆ ವ್ಯಾಪಾರಿಗಳ ಬಳಿಗೆ ಯಾರೂ ಬರಲ್ಲ. ಇದರಿಂದ ಚಿಲ್ಲರೆ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸಗಟು ವ್ಯಾಪಾರಿಗಳು ಚಿಲ್ಲರೆ ವಹಿವಾಟು ಸ್ಥಗಿತಗೊಳಿಸಿದರೆ ಮಾತ್ರ ಚಿಲ್ಲರೆ ವ್ಯಾಪಾರಿಗಳು ಪ್ರಾಂಗಣದೊಳಗೆ ಹೋಗುತ್ತೇವೆ ಎಂಬುದು ಚಿಲ್ಲರೆ ವ್ಯಾಪಾರಿಗಳ ಅಳಲಾಗಿತ್ತು. ಇದನ್ನು ಒಪ್ಪದ ಸಗಟು ವ್ಯಾಪಾರಿಗಳು ದಶಕಗಳಿಂದಲೂ ಸಗಟು ವ್ಯಾಪಾರಿಗಳು ದಡೆ (3ಕೆಜಿ) ಲೆಕ್ಕದಲ್ಲೇ ಮಾರಾಟ ಮಾಡಲಾಗುತ್ತಿದೆ. ಈಗ ಬೇಡ ಎಂದರೆ ಬಿಡಲಾಗದು ಎಂಬ ಮಾತನ್ನೂ ಹೇಳಿದ್ದರು. ಚಿಲ್ಲರೆ-ಸಗಟು ವ್ಯಾಪಾರಿಗಳ ನಡುವಿನ ಈ ಅಸಮಾಧಾನ ಭಾನುವಾರದ ಸಂತೆ ಮಾರುಕಟ್ಟೆ ಬಳಕೆಯಾಗದಿರಲು ಪ್ರಮುಖ ಕಾರಣವಾಗಿತ್ತು.
ಯಶಸ್ವಿಯಾದ ಶಾಸಕರ ಮಧ್ಯಸ್ಥಿಕೆ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯವರು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ಭಾನುವಾರದ ಸಂತೆ ಮಾರುಕಟ್ಟೆ ಪ್ರಾಂಗಣ ಬಳಕೆಗೆ ಸಂಬಂಧಿಸಿದಂತೆ ಸೂಚನೆ ನೀಡಿದ್ದರು. ಇನ್ನೆರಡು ತಿಂಗಳಲ್ಲಿ ಬಳಕೆ ಮಾಡದಿದ್ದಲ್ಲಿ ಮುಂದೆ ನಾವು ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಸಂಸ್ಥೆಯ ಸದಸ್ಯರಾದ ಪಾಲನ್ನ, ಎಪಿಎಂಸಿ ಕಾರ್ಯದರ್ಶಿಯವರು ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರೊಂದಿಗೆ ಮಧ್ಯಸ್ಥಿಕೆ ವಹಿಸಿ, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ಚರ್ಚಿಸಿ ಇಬ್ಬರನ್ನು ಮನವೊಲಿಸುವಲ್ಲಿ ಗೊಂದಲ ನಿವಾರಿಸುವಲ್ಲಿ ಯಶಸ್ವಿಯಾಗಿದ್ದರು.
ಅವೈಜ್ಞಾನಿಕ ಕಟ್ಟೆ ನಿರ್ಮಾಣ: ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆಂದು ನಿರ್ಮಿಸಲಾಗಿರುವ ಕಟ್ಟೆಗಳು ಅವೈಜ್ಞಾನಿಕವಾಗಿದೆ. ಕಟ್ಟೆಗಳನ್ನು 6×6 ಅಡಿಗಳಲ್ಲಿ ನಿರ್ಮಿಸಲಾಗಿದ್ದು, ಪಾರ್ಟಿಷನ್ ಗೋಡೆ ಎರಡು ಅಡಿಗಳಷ್ಟು ಎತ್ತರದಲ್ಲಿ ನಿರ್ಮಿಸಲಾಗಿದೆ. ಇದರಿಂದ ಕಟ್ಟೆಗಳಲ್ಲಿ ಕುಳಿತ ವ್ಯಾಪಾರಿಗಳಿಗೆ ಗ್ರಾಹಕರು ಬರುವುದೇ ಕಾಣಿಸುವುದಿಲ್ಲ. ಹಾಗಾಗಿ ಇವುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಪಾಟೀಷನ್‌ಗಳನ್ನು ಕಡಿತಗೊಳಿಸುವಂತೆ ಚಿಲ್ಲರೆ ವ್ಯಾಪಾರಿಗಳು ಕೋರಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಹ ಒಪ್ಪಿಗೆ ಸೂಚಿಸಿದ್ದಾರೆ.
ಈ ಮೊದಲು ಪ್ರಾಂಗಣದ ಹೊರಗೆ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾಗ ಇದ್ದ ಸಮಸ್ಯೆಗಳಿಲ್ಲ. ಗಾಳಿ, ಮಳೆ, ಬಿಸಿಲಿನಿಂದ ರಕ್ಷಣೆ ಒದಗಿಸಲಾಗಿದೆ. ದನ ಕರುಗಳಿಂದಲೂ ರಕ್ಷಣೆ ಲಭಿಸಿದೆ. ಕಟ್ಟೆಯ ಮೇಲೆ ನಿರ್ಮಿಸಿರುವ ಕಿರಿದಾದ ಗೋಡೆಗಳ ಎತ್ತರ ಕಡಿತಗೊಳಿಸಬೇಕು.
•ರಾಮು, ಚಿಲ್ಲರೆ ವ್ಯಾಪಾರಿ
ಭಾನುವಾರದ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟದ ವ್ಯವಸ್ಥೆ ಉತ್ತಮವಾಗಿದೆ. ಹೊರಗೆ ಇದ್ದಂತೆ ಧೂಳಿನ ಸಮಸ್ಯೆಯಿಲ್ಲ. ಅಡ್ಡಾದಿಡ್ಡಿಯಾಗಿ ಸಂಚರಿಸುವ ಆಟೋ, ಟಾಟಾ ಏಸ್‌ವಾಹನಗಳ ಸಂಚಾರವಿಲ್ಲ. ನಿಧಾನವಾಗಿ ಪ್ರಾಂಗಣದೊಳಗೆ ಒಮ್ಮೆ ಸುತ್ತಿದರೆ ಎಲ್ಲ ತರಕಾರಿಗಳು ಲಭಿಸಲಿವೆ.
•ಹೊನ್ನೂರಸ್ವಾಮಿ, ಗ್ರಾಹಕರು.