ಬಳ್ಳಾರಿ: ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿನ ಬಾಲಕರ ಬಾಲಮಂದಿರದಲ್ಲಿ 15 ದಿನಗಳ ಜಿಲ್ಲಾ ಮಟ್ಟದ ಚಿಣ್ಣರ ಬೇಸಿಗೆ ಶಿಬಿರ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಬಾಲಮಂದಿರ, ಬಿಡಿಡಿಎಸ್, ಬಾಲ ಕಾರ್ಮಿಕ ಶಾಲೆ ಮತ್ತು ಸರ್ಕಾರಿ ಶಾಲೆ ಸೇರಿ ಒಟ್ಟು 100ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದರು. ಜಿಲ್ಲಾ ಮಟ್ಟದಲ್ಲಿ 15 ದಿನಗಳ ಕಾಲ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚಿಗುರು ಕಲಾಸಂಸ್ಥೆಯ ಹುಲುಗಪ್ಪ ಜಾನಪದ ಗಾಯನ, ಕೋಲಾಟ ನೃತ್ಯದ ಬಗ್ಗೆ ಹೇಳಿಕೊಟ್ಟರು. ಕುರುಡು ಕಾಂಚಾಣ ಕುಣಿಯುತ್ತಲಿದ್ದು, ಕಾಲಿಗೆ ಬಿದ್ದವರ ತುಳಿಯುತಲಿದ್ದು’ ಎಂಬ ಗಾಯನಕ್ಕೆ ಮಕ್ಕಳು ನೃತ್ಯ ಪ್ರದರ್ಶಿಸಿದರು. ಇನ್ನುಳಿದ ಸಂಪನ್ಮೂಲ ವ್ಯಕ್ತಿಗಳು ನೃತ್ಯ, ಚಿತ್ರಕಲೆ ಸೇರಿ ಇನ್ನಿತರೆ ಕಲೆಗಳನ್ನು ಹೇಳಿಕೊಡುತ್ತಿದ್ದು, ಮಕ್ಕಳು ಸಹ ಅತ್ಯಂತ ಆಸಕ್ತಿಯಿಂದ ಕಲೆಗಳಲ್ಲಿ ಭಾಗವಹಿಸುತ್ತಿದ್ದು ಕಂಡುಬಂತು. ಜಿಲ್ಲಾಮಟ್ಟದ ಶಿಬಿರಕ್ಕೆ ಜಿಲ್ಲೆಯಿಂದ ಕೇವಲ ನಾಲ್ಕು ಮಕ್ಕಳಿಂದ ಮಾತ್ರ ಅರ್ಜಿಗಳು ಬಂದಿದ್ದು, ಅದರಲ್ಲಿ ಒಬ್ಬ ಪೋಷಕರು ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ವಾಪಸ್ ಹೋದರು.
ಶಿಬಿರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಬಾರದಿರಲು ಜಾಗೃತಿ ಕೊರತೆ ಒಂದಾದರೆ, ಬಾಲಮಂದಿರದ ಮಕ್ಕಳೊಂದಿಗೆ ಬೆರೆಯುವುದು ಕೆಲ ಪೋಷಕರಿಗೆ ಸುತಾರಾಂ ಇಷ್ಟವಿಲ್ಲ. ಹೀಗಾಗಿ ಕೆಲವರು ತಮ್ಮ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ಹೊರಗಿನ ಸರ್ಕಾರಿ ಶಾಲೆಗಳಿಂದ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಶಿಬಿರಕ್ಕೆ ಆಗಮಿಸಿದ್ದಾರೆ ಎಂದು ಬಾಲಮಂದಿರದ ಸಮಾಲೋಚಕ ರಾಘವೇಂದ್ರ ತಿಳಿಸಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಹುಲುಗಪ್ಪ, ಮಕ್ಕಳ ಪೋಷಕರು, ಮಕ್ಕಳು, ಸಂಸ್ಥೆಯ ಸಿಬ್ಬಂದಿ ಇದ್ದರು.