ಬಳ್ಳಾರಿ: ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಡಿಸಿ ಕಚೇರಿ ಎದುರು ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ನೂರಾರು ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಗ್ರಾಮ ಲೆಕ್ಕಾಧಿಕಾರಿಗಳು ಡಿಸಿ ಕಚೇರಿ ಎದುರು ಧರಣಿ ಕುಳಿತರು. ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ಕುಂದುಕೊರತೆ, ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯ ಸೇರಿದಂತೆ ಬೇರೆ ಇಲಾಖೆಯ ಕೆಲಸದ ಒತ್ತಡಗಳನ್ನು ನಮ್ಮ ಮೇಲೆ ಹೇರುತ್ತಿರುವ ಕುರಿತು ಸಾಕಷ್ಟು ಬಾರಿ ಸರ್ಕಾರದ ಗಮನಸೆಳೆದರೂ ಇಲ್ಲಿವರೆಗೂ ಕ್ರಮವಿಲ್ಲ. ಇತ್ತೀಚೆಗೆ ಮನವಿ ಸಲ್ಲಿಸಿ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಲಾಗಿತ್ತು. ನಂತರ ಕಂದಾಯ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎರಡು ಬಾರಿ ಅಧಿಕಾರಿಗಳ ಹಾಗೂ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ, ಇಲ್ಲಿವರೆಗೂ ಯಾವುದೇ ಕ್ರಮವಿಲ್ಲ. ಹೀಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೇವೆ ಸ್ಥಗಿತಗೊಳಿಸಿ, ಒಂದು ದಿನದ ಸಾಂಕೇತಿಕ ಧರಣಿ ನಡೆಸಿದ್ದೇವೆ. ಈಗಲೂ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕುಟುಂಬ ಸಮೇತ ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.
ಬೇರೆ ಇಲಾಖೆಯ ಮತ್ತು ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ಕೂಡಲೇ ನಿಲ್ಲಿಸಬೇಕು. ಈ ಕುರಿತು ಆದೇಶ ಹೊರಡಿಸಬೇಕು, ಗ್ರಾಮಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಗ್ರಾಮಲೆಕ್ಕಿಗರ ಜೇಷ್ಠತೆಯನ್ನು ಒಗ್ಗೂಡಿಸಿ ಪದ ನವೀಕರಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆ ದರವನ್ನು 1 ಸಾವಿರ ರೂ.ಗೆ ಹೆಚ್ಚಿಸಬೇಕು. ನೌಕರರಿಗೆ ಜಾಬ್ ಚಾರ್ಟ್ ನೀಡಬೇಕು ಎಂದು ತೀರ್ಮಾನಿಸಿದ್ದರೂ ಇಲ್ಲಿವರೆಗೂ ನೀಡಿಲ್ಲ. ಕೂಡಲೇ ಪರಿಷ್ಕೃತ ಜಾಬ್ ಚಾರ್ಟ್ ನೀಡಬೇಕು. ಅಕ್ರಮ ಮರಳು ದಂಧೆಕೋರರು ನಡೆಸಿದ ಲಾರಿ ದುರಂತದಲ್ಲಿ ಮೃತಪಟ್ಟ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಕುಟುಂಬಕ್ಕೆ ಕೂಡಲೇ ಸರ್ಕಾರ 20 ಲಕ್ಷರೂ.ಗಳನ್ನು ಪರಿಹಾರ ನೀಡಬೇಕು. ಗ್ರಾಮ ಸಹಾಯಕರ ಹುದ್ದೆಯನ್ನು ಕಾಯಂಗೊಳಿಸಬೇಕು ಎಂದು ಸಾಕಷ್ಟು ಬಾರಿ ಭರವಸೆ ನೀಡಿದರೂ ಇಲ್ಲಿವರೆಗೂ ಕ್ರಮವಿಲ್ಲ. ಕೂಡಲೇ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಒಂದುವೇಳೆ ಬೇಡಿಕೆಗಳನ್ನು ನಿರ್ಲಕ್ಷಿಸಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ, ಕಂದಾಯ ಸಚಿವರು, ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಕೆ.ನಾಗರಾಜ್, ಗೌರವಾಧ್ಯಕ್ಷ ಸುದೀಪ್, ಪ್ರಧಾನ ಕಾರ್ಯದರ್ಶಿ ಜನಾರ್ಧನ. ಜೆ, ಖಜಾಂಚಿ ಕೆ.ಶ್ರೀನಿವಾಸ್, ಉಪಾಧ್ಯಕ್ಷ ಚಂದ್ರಶೇಖರ್ ಉಟಕೂರು ಸೇರಿದಂತೆ ನೂರಾರು ನೌಕರರು ಇದ್ದರು.