ಬಳ್ಳಾರಿ: ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕವು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ಉತ್ತರ, ಮಧ್ಯ ಕರ್ನಾಟಕವನ್ನು ನಿರ್ಲಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಚಿತ್ರದುರ್ಗ ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆ.ಜಿ.ಜಗದೀಶ್ ಹೇಳಿದರು.
ನಗರದ ನೌಕರರ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ಆಶೀರ್ವಾದ ಬೆಂಬಲದೊಂದಿಗೆ ಸತತ ನಾಲ್ಕನೇ ಬಾರಿಗೆ ಚಿತ್ರದುರ್ಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಅಧಿಕಾರಿ ವರ್ಗದವರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವೆ. ಅದರಂತೆ ರಾಜ್ಯದ ಎಲ್ಲ ನೌಕರರ ಹಿತ ಕಾಪಾಡಲು, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಘಟಕ ಇಲ್ಲಿವರೆಗೆ ಕೇವಲ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ಮಧ್ಯ ಕರ್ನಾಟಕ, ಹೈ.ಕ. ಹಾಗೂ ಉತ್ತರ ಕರ್ನಾಟಕ ಭಾಗದವರನ್ನು ರಾಜ್ಯ ಸಮಿತಿ ಸಂಪೂರ್ಣ ಕಡೆಗಣಿಸಿದೆ. ಬೇಕಾಬಿಟ್ಟಿಯಾಗಿರುವ ಕೆಲ ಹುದ್ದೆಗಳನ್ನು ನಮ್ಮ ಈ ಭಾಗಕ್ಕೆ ನೀಡಿರುವುದನ್ನು ಬಿಟ್ಟರೆ ಉಳಿದ ಎಲ್ಲ ಪ್ರಮುಖ ಹುದ್ದೆಗಳನ್ನು ಅವರೇ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ನಮ್ಮ ನೌಕರರ ಬವಣೆ, ಎದುರಿಸುತ್ತಿರುವ ಸಮಸ್ಯೆಗಳು ಹಾಗೇ ಉಳಿದಿದ್ದು, ಇಲ್ಲಿವರೆಗೆ ರಾಜ್ಯ ಸಮಿತಿ ಅಗತ್ಯ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಚಳ್ಳಕೇರಿ ನಗರದಲ್ಲಿ ನಮ್ಮ ನೌಕರರ ಸಭೆ ನಡೆಸಿ, ಸ್ವಾಭಿಮಾನಿ ನೌಕರರ ವೇದಿಕೆಯನ್ನು ಸ್ಥಾಪಿಸಿ, ಇದರ ಮೂಲಕ ರಾಜ್ಯ ಸಮಿತಿ ಸ್ಥಾನದ ಚುನಾವಣಾ ಅಖಾಡಕ್ಕಿಳಿದಿದ್ದೇವೆ. ಅವರಂತೆ ನಮಗೆ ಅಧಿಕಾರದ ಆಸೆ ಇಲ್ಲ. ನೌಕರರ ಸೇವೆಯೇ ನಮ್ಮ ಮೂಲ ಉದ್ದೇಶವಾಗಿದೆ ಎಂದರು.
ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ಆ.7ರಂದು ಬೆಂಗಳೂರು ನಗರದಲ್ಲಿ ಚುನಾವಣೆ ನಡೆಯಲಿದೆ. 551ಮತದಾರರು ಈ ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ 23 ಮತದಾರರಿದ್ದು, ಪ್ರತಿಯೊಬ್ಬರೂ ನಮ್ಮ ತಂಡಕ್ಕೆ ಬೆಂಬಲಿಸಿ, ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ರಾಜ್ಯದ ವಿವಿಧ ಇಲಾಖೆಗಳಲ್ಲಿ 2.40ಲಕ್ಷ ನೌಕರರ ಹುದ್ದೆಗಳು ಖಾಲಿ ಇದ್ದು, ಈ ಕುರಿತು ಸಾಕಷ್ಟು ಬಾರಿ ಸರ್ಕಾರದ ಗಮನಸೆಳೆದರೂ ಕ್ರಮವಿಲ್ಲ ಎಂದ ಜಗದೀಶ್, ಈ ಕುರಿತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಹಲವು ಬಾರಿ ಗಮನಸೆಳೆದರೂ ಪ್ರಯೋಜನವಾಗಿಲ್ಲ. ಇದರಿಂದ ನಮ್ಮ ಅಕಾರಿ ವರ್ಗಕ್ಕೆ ನಾನಾ ರೀತಿಯಲ್ಲಿ ಹೊರೆಯಾಗುತ್ತಿದೆ. ಬೆ. 10ರಿಂದ ಸಂಜೆ 5ರ ಬದಲು ರಾತ್ರಿಯಿಡಿ ನಮ್ಮ ಅಕಾರಿಗಳು ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕಾದರೆ, ಖಾಲಿ ಹುದ್ದೆಗಳ ಭರ್ತಿ ತ್ವರಿತವಾಗಿ ನಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ, ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ್ ಆರ್.ಜುಮ್ಮನ್ನವರ್, ಬಳ್ಳಾರಿ ಜಿಲ್ಲಾಧ್ಯಕ್ಷ ಶಿವಾಜಿರಾವ್ ಮಾತನಾಡಿ, ಸರ್ಕಾರಿ ನೌಕರರ ನಿವೃತ್ತಿ ನಂತರದ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಆಗಿರುವ ನಿಶ್ಚಿತ ಹಳೆ ಪಿಂಚಣಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಿ ನೂತನ ಪಿಂಚಣಿ ಪದ್ದತಿಯನ್ನು ರದ್ದುಗೊಳಿಸುವುದು ಸಂಘದ ಪ್ರಮುಖ ಬೇಡಿಕೆಯಾಗಿದೆ. ಒಂದು ಸರ್ಕಾರ ಇದನ್ನು ನಿರ್ಲಕ್ಷಿಸಿದರೆ ಪ್ರತಿಭಟನೆ ಸ್ವರೂಪ ಬದಲಾವಣೆಯಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರವಿ ಗುಂಜಿಕರ್, ನಿಕಟಪೂರ್ವ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ನೌಕರರ ಸಂಘದ ಜಿ.ಕೆ. ರಾಮಕೃಷ್ಣ, ಶಿವಪ್ಪಯನ್ ಜೋಗಿ, ವೈ.ಜಿ.ಪಾಟೀಲ್, ಭದ್ರಯ್ಯ, ಮಹೆಬೂಬ್ ಬಾಷಾ ಸೇರಿದಂತೆ ಇತರರಿದ್ದರು.