Advertisement

ಜಿಂದಾಲ್ ಗೆ ಭೂಮಿ ಪರಭಾರೆ ಉತ್ತಮ ಕಾರ್ಯ

11:51 AM Jul 01, 2019 | Team Udayavani |

ಬಳ್ಳಾರಿ: ರಾಜ್ಯದ ಮೈತ್ರಿ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಎಕರೆ ಭೂಮಿ ಪರಭಾರೆ ವಿರುದ್ಧದ ಹೋರಾಟ ಕೈಗೊಂಡಿರುವ ವಿಜಯನಗರ ಶಾಸಕ ಆನಂದಸಿಂಗ್‌, ಮಾಜಿ ಶಾಸಕ ಎಚ್.ಅನಿಲ್ ಲಾಡ್‌ ಅವರದ್ದು ವೈಯುಕ್ತಿಕ ವಿಚಾರ ಎಂದು ವಿಧಾನ ಪರಿಷತ್ತಿನ ಸದಸ್ಯ ಕೆ.ಸಿ.ಕೊಂಡಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಲಾಗಿದ್ದ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ರಾಜ್ಯ ಸರ್ಕಾರ ಪರಭಾರೆ ಮಾಡಲು ಹೊರಟಿರುವ ಸಾವಿರಾರು ಎಕರೆ ಭೂಮಿಯು ಇಂದು ಅಥವಾ ನಿನ್ನೆಯ ದಿನ ರೈತರಿಂದ ಭೂಮಿಯನ್ನು ವಶ ಪಡಿಸಿಕೊಂಡಿಲ್ಲ. 2007ನೇ ಇಸ್ವಿಯಲ್ಲೇ ಈ ಭೂಮಿಯನ್ನು ವಶಪಡಿಸಿಕೊಂಡು ಜಿಂದಾಲ್ ಸಮೂಹ ಸಂಸ್ಥೆಗೆ ಲೀಜ್‌ ಕಂ ಸೇಲ್ ಡೀಡ್‌ ಒಪ್ಪಂದದಡಿ ನೀಡಲಾಗಿತ್ತು. ಆದರೀಗ ಅದನ್ನು ಮಾರಾಟದ ಕ್ರಮವಿಕ್ರಯ ಮಾಡುವ ಅನಿವಾರ್ಯತೆಯೂ ಬಂದೊದಗಿದೆ. ಹೀಗಾಗಿ, ಭೂಮಿ ಪರಭಾರೆಗೆ ಈ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ಅನುಮೋದನೆ ಪಡೆಯಲಾಗಿದೆ. ಈಗ ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿಯನ್ನು ಪರಭಾರೆ ಮಾಡೋದನ್ನು ವಿರೋಧಿಸುವ ಶಾಸಕ ಆನಂದಸಿಂಗ್‌ ಹಾಗೂ ಮಾಜಿ ಶಾಸಕ ಎಚ್.ಅನಿಲ್ ಲಾಡ್‌ ಅವರ ನಡೆಯು ಸರಿಯಾಗಿಲ್ಲ. ಹಾಗೊಂದು ವೇಳೆ ಅವರು ಭೂಮಿ ಪರಭಾರೆ ವಿರೋಧಿಸುವುದೇ ಆದರೆ, ಅದು ಅವರ ವೈಯಕ್ತಿಕ ವಿಚಾರ. ಅವರ ವಿರೋಧಕ್ಕೂ ಈ ಮೈತ್ರಿಕೂಟ ಸರ್ಕಾರದ ನಿರ್ಣಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ವಿರುದ್ಧದ ಹೋರಾಟ ಶಾಸಕ ಆನಂದಸಿಂಗ್‌, ಮಾಜಿ ಶಾಸಕ ಅನಿಲ್ ಲಾಡ್‌ ಅವರದು ವೈಯುಕ್ತಿಕ ವಿಚಾರ. ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಉತ್ತಮ ಕೆಲಸ, ಕಾರ್ಯಗಳಿಗೆ ಅನೇಕ ವಿಘ್ನಗಳು ಎದುರಾಗುತ್ತಿವೆ. ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ ಅವರು ಸೇರಿದಂತೆ ಅನೇಕರು ಇಲ್ಲಿಗೆ ಬಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿ ರೈತರ ಭೂಮಿಯನ್ನು ಯಾರು ಕೊಡುತ್ತಿಲ್ಲ. ಸರ್ಕಾರದ ಭೂಮಿಯನ್ನು ನೀಡಲಾಗುತ್ತಿದೆ. ಜಿಂದಾಲ್ ಒಳ್ಳೆಯ ಕಂಪನಿ. ಅದು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ. ನ್ಯಾಯಯುತವಾಗಿ ಈ ಭೂಮಿಯನ್ನು ಜಿಂದಾಲ್ಗೆ ನೀಡಲಾಗುತ್ತಿದೆ. ಉದ್ಯಮಗಳಿಗೆ ಹೀಗೆ ತಡೆ ಮಾಡಿದರೆ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕೈಗಾರಿಕೆಗಳು ಬರುವುದೇ ಕಷ್ಟವಾಗುತ್ತದೆ. ಸ್ವಪಕ್ಷದವರಾದ ಶಾಸಕ ಆನಂದ ಸಿಂಗ್‌, ಮಾಜಿ ಶಾಸಕ ಅನಿಲ್ ಲಾಡ್‌ ಅವರು ವಿರೋಧ ಮಾಡುವುದು ಅವರ ವೈಯಕ್ತಿಕ ವಿಚಾರ. ಯಾರೊಬ್ಬರೂ ಕೂಡ ದಾಖಲೆಗಳನ್ನು ತೆಗೆದುಕೊಂಡು ಬಂದು ಚರ್ಚೆ ಮಾಡುವುದಿಲ್ಲ. ಇದರ ಸತ್ಯಾಂಶ ತಿಳಿದವರು ಯಾರು ಕೂಡ ವಿರೋಧ ಮಾಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next