ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ನೀಗಿಸುವ ಸಲುವಾಗಿ ಆಂಗ್ಲಮಾಧ್ಯಮ ಆರಂಭಿಸಿರುವ ರಾಜ್ಯ ಸರ್ಕಾರ, ನೂರಾರು ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಸಿರಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಸಜ್ಜಿತ ಕೊಠಡಿ ಒದಗಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ಹಲವು ವರ್ಷಗಳಿಂದ ಶಿಥಿಲಾವಸ್ಥೆ ತಲುಪಿದ ಕೊಠಡಿಗಳಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು ಮೇಲ್ಛಾವಣಿ ಕುಸಿಯುವ ಆತಂಕ ಎದುರಿಸುತ್ತಿದ್ದಾರೆ.
ತಾಲೂಕಿನ ಸಿರಿವಾರ ಗ್ರಾಮದಲ್ಲಿನ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಯಿದ್ದು, 1 ರಿಂದ 8ನೇ ತರಗತಿ ವರೆಗೆ ಒಟ್ಟು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಇರುವ 17 ತರಗತಿ ಕೊಠಡಿಗಳು ಇದ್ದು, ಇವೆಲ್ಲರೂ ಸುಸಜ್ಜಿತವಾಗಿದ್ದರೆ ವಿದ್ಯಾರ್ಥಿಗಳು ನಿಶ್ಚಿಂತೆಯಿಂದ ಪಾಠ ಕೇಳಬಹುದಿತ್ತು. ಆದರೆ, ಈ ಪೈಕಿ ಬಹುತೇಕ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಮೂರ್‍ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಕೊಠಡಿಗಳೊಂದಿಗೆ ಕಳೆದ 2007-2008ರಲ್ಲಿ ಕಳಪೆಯಾಗಿ ನಿರ್ಮಿಸಲಾಗಿದ್ದ ಕೊಠಡಿಗಳು ಸಹ ಶಿಥಿಲಾವಸ್ಥೆ ತಲುಪಿದ್ದು, ಮೇಲ್ಛಾವಣಿಯ ಕಾಂಕ್ರೀಟ್ ಉದುರಿ ಬೀಳುತ್ತಿರುವುದು ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕಚೇರಿಯ ಕೊಠಡಿ ಪಕ್ಕದಲ್ಲೇ ಹಳೆಯ ಕಾಲದ ತರಗತಿ ಕೊಠಡಿ ತರಗತಿ ಕೊಠಡಿಯಿದೆ. ಆ ಕೊಠಡಿಗೆ ಸುಣ್ಣ ಬಣ್ಣ ಬಳಿದು ಸಾಕಷ್ಟು ದಶಕಗಳೇ ಗತಿಸಿದೆ. ಕೊಠಡಿಯೊಳಗೆ ಪ್ರವೇಶಿಸಿದರೆ ಸಾಕು. ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಕುಸಿಯುವ ಹಂತ ತಲುಪಿರುವ ಮೇಲ್ಛಾವಣಿಯ ತೊಲೆ (ಕಟ್ಟಿಗೆ)ಗಳು ಮುರಿದಿದ್ದು, ಯಾವ ಸಂದರ್ಭದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿದೆ. ಕುಸಿಯದಂತೆ ತರಗತಿ ಕೊಠಡಿಯಲ್ಲಿ ಕಟ್ಟಿಗೆ ಕಂಬವನ್ನು ಆಧಾರವಾಗಿರಿಸಿ ಕೆಳಗಡೆ 6ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಲಾಗುತ್ತಿದೆ. ಅಲ್ಲದೇ, ಕೊಠಡಿಯ ನಾಲ್ಕು ಕಡೆ ಗೋಡೆಗಳು ಬಿರುಕು ಬಿಟ್ಟಿವೆ. ಒಮ್ಮೆ ಜೋರಾಗಿ ಮಳೆ ಬಂದರೆ ಕೊಠಡಿಯ ನಾಲ್ಕು ಮೂಲೆಗಳಿಂದಲೂ ನೀರು ಒಳನುಗ್ಗುತ್ತಿದೆ.
ಪಕ್ಕದಲ್ಲಿನ ಮತ್ತೂಂದು ತರಗತಿ ಕೊಠಡಿಯಲ್ಲೂ ಇದೇ ಪರಿಸ್ಥಿತಿ ಇದ್ದು, ಕಾಂಕ್ರೀಟ್ನಿಂದ ನಿರ್ಮಿಸಿರುವ ಮೇಲ್ಛಾವಣಿ ಸಂಪೂರ್ಣ ಕುಸಿದು ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಆಗಾಗ ಕಾಂಕ್ರೀಟ್ ಉರುತ್ತಿದ್ದು, ವಿದ್ಯಾರ್ಥಿಗಳು ಆಗಾಗ ತೊಂದರೆ ಅನುಭವಿಸುವಂತಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಮೂಲಿಮನಿ ಶಿವರುದ್ರಪ್ಪ ದೂರುತ್ತಾರೆ.
ಗೋದಾಮು ಆದ ಕೊಠಡಿ: ಇನ್ನು ಶಾಲೆಯ ಒಟ್ಟು ಕೊಠಡಿಗಳ ಪೈಕಿ ಒಂದನ್ನು ಗೋದಾಮನ್ನಾಗಿ ಮಾಡಲಾಗಿದೆ. ಬಳಕೆಯಾಗದ ವಸ್ತುಗಳನ್ನೆಲ್ಲ ಕೊಠಡಿಯೊಳಗೆ ದಾಸ್ತಾನಿಡಲಾಗಿದೆ. ತಡಗಿನ ಶೀಟ್, ವಿದ್ಯಾರ್ಥಿಗಳು ಕುಳಿತುಕೊಳ್ಳುವ ಆಸನಗಳು ಸೇರಿದಂತೆ ಇತರೆ ಸಾಮಗ್ರಿಗಳು ತುಕ್ಕು ಹಿಡಿದಿವೆ. ಆ ಕೊಠಡಿಯ ಮುಂದೆನೇ ಹೆಚ್ಚುವರಿ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. ಅಲ್ಲದೇ, ಗ್ರಾಮದಲ್ಲಿನ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆಯೇ ಶಾಲೆಯ ತರಗತಿ ಕೊಠಡಿಗಳ ಸ್ಥಿತಿ ಇಷ್ಟೊಂದು ಶಿಥಿಲಾವಸ್ಥೆಗೆ ತಲುಪಲು ಪ್ರಮುಖ ಕಾರಣವಾಗಿದೆ. ತರಗತಿ ಕೊಠಡಿಗಳ ಅಭಿವೃದ್ಧಿಗೆ ಉಭಯ ಶಾಲೆಗಳ ಮುಖ್ಯಶಿಕ್ಷಕರು ವಿಫಲರಾಗಿದ್ದಾರೆ ಎಂದು ದೂರುತ್ತಾರೆ. 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾಗಿ ಕೊಠಡಿಗಳು ಅಗತ್ಯ. ಇರುವ 17 ಕೊಠಡಿಗಳ ಪೈಕಿ ಐದಾರು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳಿಗೆ ಪಾಠ ಮಾಡಲು ಯೋಗ್ಯವಾಗಿಲ್ಲ. ಸದ್ಯ ಶಿಥಿಲಾವಸ್ಥೆ ಕೊಠಡಿಗಳಲ್ಲೇ ಮೇಲ್ಛಾವಣಿಗೆ ಆಧಾರವಾಗಿರಿಸಿ ತರಗತಿ ನಡೆಸಲಾಗುತ್ತಿದೆ. ಮುಂದಾಗುವ ಅನಾಹುತ ತಪ್ಪಿಸುವ ಸಲುವಾಗಿ ಶೀಘ್ರದಲ್ಲೇ ಶಿಥಿಲಾವಸ್ಥೆ ತಲುಪಿರುವ ಕೊಠಡಿ ದುರಸ್ತಿಗೊಳಿಸಿಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ಶಾಲೆಯ ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಕಾರ್ಯಪ್ರವೃತ್ತರಾಗಬೇಕಾಗಿದೆ.
ಸಿರಿವಾರ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 17 ಕೊಠಡಿಗಳಿವೆ. ಕಳೆದ ವರ್ಷ 792 ವಿದ್ಯಾರ್ಥಿಗಳು ಇದ್ದು, ಪ್ರಸಕ್ತ ವರ್ಷ ಒಂದನೇ ತರಗತಿಗೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ 17 ಕೊಠಡಿಗಳು ಇವೆ. ಇದರಲ್ಲಿ ದಶಕಗಳ ಹಿಂದೆ ನಿರ್ಮಿಸಿದ್ದ 3, 2007-8ನೇ ಸಾಲಿನಲ್ಲಿ ನಿರ್ಮಿಸಿದ್ದ 3 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಶಾಲಾ ನಿರ್ವಹಣೆಗಾಗಿ ಪ್ರಸಕ್ತ ವರ್ಸ 37,500 ರೂ. ಅನುದಾನ ಬಂದಿದ್ದು, ಇದರಲ್ಲಿ 20 ಸಾವಿರ ರೂ. ವೆಚ್ಚದಲ್ಲಿ ತರಗತಿ ಕೊಠಡಿ ದುರಸ್ತಿಗೊಳಿಸಲಾಗುವುದು.
•
ಕೆ.ಕೆ.ಗಾದಿಲಿಂಗಪ್ಪ,
ಪ್ರಭಾರಿ ಮುಖ್ಯಶಿಕ್ಷಕರು.
ಸಿರಿವಾರ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಸರಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ 16 ಕೊಠಡಿಗಳಿವೆ. ಅದರೊಳಗೆ ಬಹುತೇಕ ಕೊಠಡಿಗಳ ಶಿಥಿಲಾವಸ್ಥೆಗೆ ತಲುಪಿವೆ. ಅವುಗಳ ದುರಸ್ತಿ ಕಾರ್ಯಕ್ಕೆ ಶಿಕ್ಷಣ ಇಲಾಖೆ ಮುಂದಾಗದಿರುವುದು ವಿಪರ್ಯಾಸ.
•
ಹನುಮಂತಪ್ಪ,
ಶಾಲಾಭಿವೃದ್ಧಿ ಸಮಿತಿ ಸದಸ್ಯ.