Advertisement

ಹಡಪದ ಅಪ್ಪಣ್ಣ ಸಾಹಿತ್ಯ ಚಳವಳಿಯ ಶಕ್ತಿ

04:13 PM Jul 17, 2019 | Naveen |

ಬಳ್ಳಾರಿ: ಶಿವಶರಣ ಹಡಪದ ಅಪ್ಪಣ್ಣ ಅವರು, ಸರ್ವಜನರ ಸಮಾನತೆಗಾಗಿ ಸಾಹಿತ್ಯ ಚಳವಳಿಯ ಮೂಲಕ ಶ್ರಮಿಸಿದ ಮಹಾನ್‌ ವ್ಯಕ್ತಿಯಾಗಿದ್ದರು. 12ನೇ ಶತಮಾನದ ವಚನ ಸಾಹಿತ್ಯ ಚಳವಳಿಗೆ ಅವರು ನೀಡಿದ ಕೊಡುಗೆಯೂ ಅಪಾರ ಎಂದು ತಹಶೀಲ್ದಾರ್‌ ಯು.ನಾಗರಾಜ ಹೇಳಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಶರಣ ಹಡಪದ ಅಪ್ಪಣ್ಣ ಅವರು ವಚನಕಾರ, ಅಂತರಂಗದ ಆಪ್ತ ಒಡನಾಡಿ, ಬಸವಣ್ಣನವರ ಅತ್ಯಂತ ನಿಕಟವರ್ತಿಯಾಗಿದ್ದರು. ಇವರು ಸಾಮಾಜಿಕ ಬದಲಾವಣೆಗಾಗಿ ಶ್ರಮಿಸಿದ ದೃಷ್ಟಾಂತ ವಿವರಿಸಿದರು.

ವಚನಕಾರ ಅಪ್ಪಣ್ಣ ಅವರು ಬಸವಪ್ರಿಯ ಕೂಡಲ ಚನ್ನಬಸವ ಎಂಬ ಅಂಕಿತವನ್ನಿಟ್ಟುಕೊಂಡು ಸುಮಾರು 243ಕ್ಕೂ ಹೆಚ್ಚಿನ ವಚನ ರಚಿಸಿದ್ದಾರೆ. ಆ ವಚನಗಳಲ್ಲಿ ಮಾನವೀಯ ಮೌಲ್ಯಗಳು, ಸಾಮಾಜಿಕ ಬದಲಾವಣೆ ಅಂಶಗಳು ಮತ್ತು ಸರ್ವಜನರ ಸಮಾನತೆಯ ಸಲಹೆಗಳಿದ್ದು, ಅವರ ಆದರ್ಶಗಳನ್ನು ಇಂದಿನ ಯುವಜನರು ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಡಪದ ಸಮಾಜದ ಮುಖಂಡರಾದ ಲಿಂಗಪ್ಪ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

ಗಮನ ಸೆಳೆದ ಮೆರವಣಿಗೆ: ಇದಕ್ಕೂ ಮುನ್ನ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಮೆರವಣಿಗೆ ಗಮನ ಸೆಳೆಯಿತು. ನಗರದ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಗೆ ತಹಶೀಲ್ದಾರ್‌ ನಾಗರಾಜ್‌ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಹಡಪದ ಸಮಾಜದ ಮುಖಂಡರಾದ ಲಿಂಗಪ್ಪ ಸೇರಿದಂತೆ ಅನೇಕರು ಇದ್ದರು. ಮುನ್ಸಿಪಲ್ ಕಾಲೇಜಿನಿಂದ ಆರಂಭವಾದ ಮೆರವಣಿಗೆಯು ರಾಯಲ್ ಸರ್ಕಲ್ ಮೂಲಕ ಬೆಂಗಳೂರು ರಸ್ತೆ ಮಾರ್ಗವಾಗಿ ಮೋತಿವೃತ್ತದ ಮೂಲಕ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತೆರಳಿತು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ವೀರಗಾಸೆ, ತಾಷಾರಂಡೋಲ್ ಕಲಾ ತಂಡಗಳ ಪ್ರದರ್ಶನ ಗಮನಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next