ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಅಧಿಕಾರ ಉಳಿಸಿಕೊಳ್ಳುವ ಯತ್ನದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬುದಕ್ಕೆ ಬಿದಾಯಿ (ಶಾದಿಭಾಗ್ಯ) ಯೋಜನೆಗೆ ಪ್ರಸಕ್ತ ಸಾಲಿನ ಅನುದಾನ ಬಿಡುಗಡೆಗೊಳ್ಳದಿರುವುದು ಇದಕ್ಕೆ ಸಾಕ್ಷಿ ಎಂಬಂತಿದೆ.
ಅನುದಾನ ಇಲ್ಲದ ಕಾರಣಕ್ಕೆ ಶಾದಿಭಾಗ್ಯ ಯೋಜನೆಯ ಸುಮಾರು 33 ಸಾವಿರ ಅರ್ಜಿ ಬಾಕಿ ಉಳಿದಿದ್ದು, ಸಾಲ ಮಾಡಿರುವ ಫಲಾನುಭವಿಗಳು ಪ್ರೋತ್ಸಾಹಧನಕ್ಕಾಗಿ ಎದುರು ನೋಡುವಂತಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರು 2013ರಲ್ಲಿ ಅಧಿಕಾರಕ್ಕೆ ಬಂದಾಗ ಎಲ್ಲ ಸಮುದಾಯಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಂತೆ ಅಲ್ಪಸಂಖ್ಯಾತರಿಗೂ ಬಿದಾಯಿ (ಶಾದಿಭಾಗ್ಯ) ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್ ಸೇರಿ ಹಲವಾರು ಸಮುದಾಯಗಳಲ್ಲಿನ ಬಡ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಿತ್ತು. ಆದರೆ ಯೋಜನೆಗೆ ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 33 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ಶಾದಿಭಾಗ್ಯ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಕುಟುಂಬದ ವಿಧವೆಯರು, ವಿಚ್ಛೇದಿತ ಮಹಿಳೆಯರು, ಹೆಣ್ಣು ಮಕ್ಕಳ ಮದುವೆಗಾಗಿ ಸರ್ಕಾರದಿಂದ 50 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಕಳೆದ 2018 ಫೆಬ್ರವರಿಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ ಕೊನೆಯ ಬಜೆಟ್‌ನಲ್ಲಿ 125 ಕೋಟಿ ರೂಗಳನ್ನು ಮೀಸಲಿಡಲಾಗಿದ್ದ ಈ ಯೋಜನೆಗೆ, ವಿಧಾನಸಭೆ ಚುನಾವಣೆ ನಡೆದ ಬಳಿಕ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಕೇವಲ 55 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿದೆ.
ಇಷ್ಟು ಕಡಿಮೆ ಅನುದಾನವನ್ನು ರಾಜ್ಯಾದ್ಯಂತ ಬಾಕಿ ಇರುವ 33 ಸಾವಿರ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ವಾಸ್ತವದಲ್ಲಿ ಯೋಜನೆಗೆ ಸುಮಾರು 150 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ದ ಅಗತ್ಯವಿದೆ ಎಂದು ಇಲಾಖೆ ಮೂಲಗಳು ಹೇಳುತ್ತಿವೆ.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 2013-14ನೇ ಸಾಲಿನಿಂದ 2019ರವರೆಗೆ ಒಟ್ಟು 6216 ಅರ್ಜಿಗಳನ್ನು ಸಲ್ಲಿಕೆಯಾಗಿವೆ. ಇದರಲ್ಲಿ ಈವರೆಗೆ ಕೇವಲ 2436 ಅರ್ಜಿಗಳು ಮಾತ್ರ ವಿಲೇವಾರಿಯಾಗಿದ್ದು, ಅನುದಾನ ಬಿಡುಗಡೆಗೊಳಿಸಲಾಗಿದೆ. ಬಾಕಿ 3780 ಅರ್ಜಿಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲ. ಇನ್ನುಳಿದಂತೆ ರಾಯಚೂರು ಜಿಲ್ಲೆ 1035, ಧಾರವಾಡ 2440, ಹಾವೇರಿ 2342, ಬೀದರ್ 2230, ಬೆಳಗಾವಿ 1508, ದಕ್ಷಿಣಕನ್ನಡ 1626, ದಾವಣಗೆರೆ 1387, ವಿಜಯಪುರ 1017, ಮೈಸೂರು 1005, ಶಿವಮೊಗ್ಗ ಜಿಲ್ಲೆಯಲ್ಲಿ 933 ಅರ್ಜಿಗಳು ಬಾಕಿ ಉಳಿದಿದ್ದು, ರಾಜ್ಯಾದ್ಯಂತ 30 ಜಿಲ್ಲೆಗಳ 33 ಸಾವಿರಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡಬೇಕಿದ್ದು, ಅರ್ಜಿ ಸಲ್ಲಿಸಿದ ಫಲಾನುಭವಿಗಳು ಪ್ರೋತ್ಸಾಹಧನಕ್ಕಾಗಿ ಇಲಾಖೆಗೆ ಪ್ರತಿದಿನ ಆಲೆದಾಡುವಂತಾಗಿದೆ.