Advertisement

ಪ್ರತ್ಯೇಕ ಜಿಲ್ಲೆ ಕೂಗಿಗೆ ಚುನಾವಣೆಯ ಬ್ರೇಕ್ !

04:08 PM Sep 22, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವ ಅನರ್ಹ ಶಾಸಕ ಆನಂದ್‌ಸಿಂಗ್‌ ಪ್ರಯತ್ನಕ್ಕೆ ಜಿಲ್ಲೆಯಾದ್ಯಂತ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ವಿಜಯನಗರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿರುವುದು ಹೊಸ ಜಿಲ್ಲೆ ರಚನೆಗೆ ತಾತ್ಕಾಲಿಕ ಬ್ರೇಕ್‌ ಬಿದ್ದಂತಾಗಿದೆ.

Advertisement

ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಕಳೆದ ಒಂದೂವರೆ ದಶಕದಿಂದ ಕೇಳಿಬರುತ್ತಿದೆ. ಕಳೆದ ಎರಡು ಅವ ಧಿಗೆ ಬರೋಬ್ಬರಿ ಹನ್ನೊಂದು ವರ್ಷಗಳ ಕಾಲ ವಿಜಯನಗರ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿ ಸಿದ್ದ ಅನರ್ಹ ಶಾಸಕ ಆನಂದ್‌ಸಿಂಗ್‌ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿಸುವ ವಿಷಯವನ್ನು ಒಮ್ಮೆಯೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಿರುವುದು ಹಲವು ಅನುಮಾನಗಳನ್ನು ಮೂಡಿಸಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಜಯಗಳಿಸಿದ್ದ ಆನಂದ್‌ಸಿಂಗ್‌ ಗೆ, ಕ್ಷೇತ್ರದಲ್ಲಿ ತನ್ನ ವರ್ಚಸ್ಸು ಕಡಿಮೆಯಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಹಾಗಾಗಿ ದಶಕದ ವಿಜಯನಗರ ಜಿಲ್ಲೆಯ ಕೂಗಿಗೆ ಇದೀಗ ಧನಿಗೂಡಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ತನ್ನ ವರ್ಚಸ್ಸನ್ನು ಪುನಃ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ರೆಡ್ಡಿಗಳ ಮುಷ್ಠಿಯಿಂದ ಹೊರಬರುವ ಪ್ರಯತ್ನ?: ಗಣಿನಾಡು ಬಳ್ಳಾರಿ ಜಿಲ್ಲೆಯ ಮೇಲೆ ರೆಡ್ಡಿ ಸಹೋದರರು, ರಾಮುಲು ಹಿಡಿತ ಸಾಧಿಸಿದ್ದಾರೆ. ಇವರ ಕಪಿಮುಷ್ಠಿಯಿಂದ ಹೊರಬರುವ ಸಲುವಾಗಿಯೇ ಆನಂದ್‌ಸಿಂಗ್‌ ಅವರು ಬಿಜೆಪಿ ಬಿಟ್ಟಿದ್ದಾರೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ತಮ್ಮ ಕ್ಷೇತ್ರವನ್ನೇ ಜಿಲ್ಲಾ ಕೇಂದ್ರವಾಗಿ ಮಾಡಿಕೊಂಡರೆ, ತಮ್ಮದೇ ವಿಜಯನಗರ ಜಿಲ್ಲೆಯಲ್ಲಿ ಹಿಡಿತ ಸಾಧಿಸಬಹುದು. ಸಚಿವರೂ ಆಗಬಹುದು. ಚುನಾವಣೆಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪಕ್ಷದಲ್ಲೂ ಹಿಡಿತ ಸಾಧಿಸಬಹುದು ಎಂಬ ಉದ್ದೇಶದಿಂದ ಅನರ್ಹ ಶಾಸಕ ಆನಂದ್‌ಸಿಂಗ್‌ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಪಟ್ಟು ಹಿಡಿದಿದ್ದಾರೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ, ರಾಮುಲು ಅವರಿಗೆ ಪರ್ಯಾಯವಾಗಿ ಆನಂದ್‌ಸಿಂಗ್‌ರನ್ನು ಬೆಳೆಸಲು ಬಿಜೆಪಿ ಹೈಕಮಾಂಡ್‌ ಸಹ ಸಿಂಗ್‌ಗೆ ಬೆಂಬಲ ಸೂಚಿಸುತ್ತಿದೆ ಎಂಬ ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

ಹೊಸ ಜಿಲ್ಲೆ ರಚನೆಗೆ ತಾತ್ಕಾಲಿಕ ಬ್ರೇಕ್‌: ವಿಜಯನಗರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿರುವುದು ಹೊಸಪೇಟೆಯನ್ನು ವಿಜಯನಗರ ಜಿಲ್ಲಾ ಕೇಂದ್ರವನ್ನಾಗಿ ರಚಿಸುವ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್‌ ಬಿದ್ದಂತಾಗಿದೆ. ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಯಾವೊಂದು ಸಂಘಟನೆಗಳಿಂದಲೂ ವಿರೋಧ ವ್ಯಕ್ತವಾಗದೆ ಭಾರಿ ಬೆಂಬಲ ಲಭಿಸಿತ್ತು. ಪರಿಣಾಮ ಕ್ಷೇತ್ರದಲ್ಲಿ ಪುನಃ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಆನಂದ್‌ಸಿಂಗ್‌ ಆ ಮೂಲಕ ಉಪಚುನಾವಣೆಗೆ ತಯಾರಿ ನಡೆಸಿದ್ದರು. ಆದರೆ ವಿಜಯನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉಪಚುನಾವಣೆಗೆ ಮುನ್ನವೇ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ರೂಪಿಸುವ ಆನಂದ್‌ಸಿಂಗ್‌ ಪ್ರಯತ್ನಕ್ಕೆ ತಾತ್ಕಾಲಿಕವಾಗಿ ಬ್ರೇಕ್‌ ಬಿದ್ದಂತಾಗಿದ್ದು,

ವಿಜಯನಗರ ಜಿಲ್ಲೆಗೆ ಎಲ್ಲೆಡೆ ವಿರೋಧ: ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುವ ಅನರ್ಹ ಶಾಸಕ ಆನಂದ್‌ಸಿಂಗ್‌ ಮತ್ತು ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸುವಂತೆ ಆದೇಶ ಹೊರಡಿಸಿರುವ ಸರ್ಕಾರದ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಶಾಸಕರಾದ ಜಿ. ಸೋಮಶೇಖರರೆಡ್ಡಿ, ಪಿ.ಟಿ.ಪರಮೇಶ್ವರನಾಯ್ಕ, ಜಿ. ಕರುಣಾಕರರೆಡ್ಡಿ ಸೇರಿದಂತೆ ಬಹುತೇಕರು, ಕನ್ನಡ ಪರ, ರೈತ ಪರ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ಅನರ್ಹ ಶಾಸಕ ಆನಂದ್‌ಸಿಂಗ್‌ರ ಸ್ವಾರ್ಥ ರಾಜಕಾರಣಕ್ಕೆ ರಾಜ್ಯ ಸರ್ಕಾರ ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ಶಾಸಕರು, ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next