Advertisement

ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು

01:25 PM Jul 13, 2019 | Naveen |

ಬಳ್ಳಾರಿ: ಆಶಾ ಕಾರ್ಯಕರ್ತೆಯರ ಮಾಸಿಕ ವೇತನ ನಿಗದಿಪಡಿಸಬೇಕು. ಬಾಕಿ ಪ್ರೋತ್ಸಾಹಧನ ನೀಡಬೇಕು ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ನಾರಾಯಣರಾವ್‌ ಉದ್ಯಾನವನದಿಂದ ಆರಂಭವಾಗಿದ್ದ ಪ್ರತಿಭಟನಾ ಮೆರವಣಿಗೆಯು ಗಡಗಿ ಚನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಬಳಿಕ ಡಿಸಿ ಕಚೇರಿ ಎದುರಿನ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ ಪ್ರತಿಭಟನಾನಿರತರು ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಆರೋಗ್ಯ ಇಲಾಖೆಯಡಿ ಮಹತ್ತರವಾದ ಕೆಲಸಗಳನ್ನು ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಹಳ್ಳಿ, ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸುವ ಇವರು, ಗರ್ಭಿಣಿ ಮಹಿಳೆಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಠಿಕತೆ ಅರಿವು ಮೂಡಿಸುತ್ತ, ಕ್ಷಯ, ಕುಷ್ಠರೋಗ, ಮಲೇರಿಯಾ, ಡೆಂಘಿ, ಚಿಕುನ್‌ಗುನ್ಯಾ ಸೇರಿ ಇತರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿದ ನೆರೆಯ ಆಂಧ್ರಪ್ರದೇಶದಲ್ಲಿ 10 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ. ಅದೇ ರೀತಿ ರಾಜ್ಯದಲ್ಲೂ 12 ಸಾವಿರ ರೂ. ನಿಗದಿಯಾಗಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ನೀಡುವ ಪ್ರೋತ್ಸಾಹ ಧನವನ್ನು ಒಟ್ಟಿಗೆ ಸೇರಿಸಿ ಮಾಸಿಕ ಕನಿಷ್ಠ 12 ಸಾವಿರ ರೂ. ಗೌರವಧನ ನಿಗದಿಪಡಿಸಬೇಕು. ಆಶಾ ಸಾಫ್ಟ್‌, ಆರ್‌ಸಿಎಚ್ ಪೋರ್ಟಲ್ಗೆ ಆಶಾ ಪ್ರೋತ್ಸಾಹಧನವನ್ನು ಜೋಡಣೆ ಮಾಡುವುದನ್ನು ರದ್ದುಪಡಿಸಬೇಕು. ಕಳೆದ 10 ತಿಂಗಳಿಂದ ಬಾಕಿ ಇರುವ ಎಂಸಿಟಿಎಸ್‌ ಸೇವೆಗಳ ಆಶಾ ಪ್ರೋತ್ಸಾಹಧನವನ್ನು ಮಾಸಿಕ 3 ಸಾವಿರ ರೂ. ನೀಡಬೇಕು. ಇದನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಹಿಂದಿನ ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಬೇಕು. ಈ ಮೂಲಕ ಆಶಾಗಳ ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ, ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಿ, ಕಾರ್ಪಸ್‌ ಫಂಡ್‌ ಮೀಸಲಿಟ್ಟು ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ನಿವೃತ್ತಿಯಾದ ಆಶಾಗಳಿಗೆ ಪಿಂಚಣಿ, ಇಡಿಗಂಟು ನೀಡಬೇಕು ಸೇರಿದಂತೆ ಇನ್ನಿತರೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್‌, ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ, ಎಐಎಂಎಸ್‌ಎಸ್‌ ರಾಜ್ಯ ಉಪಾಧ್ಯಕ್ಷೆ ಎಂ.ಎನ್‌. ಮಂಜುಳಾ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಎ. ದೇವದಾಸ್‌, ಎ.ಶಾಂತಾ, ಗೀತಾ, ವೀರಮ್ಮ, ಮಂಗಳಾ, ರಾಜೇಶ್ವರಿ, ನೇತ್ರಾವತಿ, ಅನಂತಲಕ್ಷ್ಮೀ, ಚೆನ್ನಮ್ಮ, ಗೌರಮ್ಮ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next