ಬಳ್ಳಾರಿ: ಬಿಹಾರದಲ್ಲಿ ಮೆದುಳು ಉರಿಯೂತಕ್ಕೆ ನೂರಾರು ಮಕ್ಕಳು ಬಲಿಯಾದರೂ ನಿಯಂತ್ರಿಸುವಲ್ಲಿ ವಿಫಲವಾಗಿರುವ ಬಿಹಾರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಎಸ್‌ಯುಸಿಐ(ಸಿ) ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಬಿಹಾರದಲ್ಲಿ ಮುಜಾಫ್ಪರಪುರ ಜಿಲ್ಲೆಯಲ್ಲಿ ಮೆದುಳಿನ ಉರಿಯೂತಕ್ಕೆ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಬಿಹಾರ ರಾಜ್ಯದಲ್ಲಿ ಇದುವರೆಗೆ 600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಇಂತಹ ಸಂಪೂರ್ಣ ವೈಫಲ್ಯವಾಗಿದೆ. ಸರಣಿ ಸಾವಿಗೆ ಈ ಮಕ್ಕಳು ಲಿಚಿಹಣ್ಣನ್ನು ತಿಂದಿರುವುದೆ ಕಾರಣ ಎಂದು ಹೇಳಿ ದಿಕ್ಕು ತಪ್ಪಿಸಲಾಗುತ್ತಿದೆ. ವೈದ್ಯಕೀಯ ತಜ್ಞರ ಅಭಿಪ್ರಾಯದಲ್ಲಿ ಬಡತನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ರಾತ್ರಿ ಊಟ ಮಾಡದೆ ಲಿಚಿಹಣ್ಣು ತಿಂದರೆ ಮಾತ್ರವೇ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಯಲ್ಲಿ ತಿಳಿಸಿದ್ದಾರೆ.
ಈ ಭಾಗದಲ್ಲಿ ಪ್ರತಿ ವರ್ಷ ಮೇ-ಜೂನ್ ತಿಂಗಳಲ್ಲಿ ಲಿಚಿಹಣ್ಣಿನ ಕೊಯ್ಲಿನ ಕಾಲದಲ್ಲಿ ಬಡ ಮಕ್ಕಳಲ್ಲಿ ಮೆದುಳಿನ ಉರಿಯೂತದ ಪ್ರಕರಣಗಳು ಮರುಕಳಿಸುತ್ತಿವೆ. ಲಿಚಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಮತ್ತು ಸುತ್ತಮುತ್ತಲಿನ ಬಡ ಕುಟುಂಬಗಳ ಮಕ್ಕಳು ರಾತ್ರಿ ಹೊತ್ತು ಕಡ್ಡಾಯವಾಗಿ ಊಟ ಮಾಡದೆ ಮಲಗಬಾರದು ಎಂಬ ಅರಿವನ್ನು ಮೂಡಿಸಬೇಕಿತ್ತು. ಆದರೆ, ಸರ್ಕಾರಿ ಆಡಳಿತ ವ್ಯವಸ್ಥೆ ಚುನಾವಣಾ ತಯಾರಿಯಲ್ಲಿ ಮುಳುಗಿ ಈ ಕಾಯಿಲೆಯನ್ನು ಎದುರಿಸಲು ವೈಫಲ್ಯವಾಗಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಕ್ಕಳು ಸಾವು ಅತ್ಯಂತ ಹೃದಯ ವಿದ್ರಾವಕ ಸಂಗತಿಯಾಗಿದೆ. ಮುಂದಿನ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು. ಬಿಹಾರದಲ್ಲಿ ಈ ಕಾಯಿಲೆಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕು. ಇಂಥ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್‌ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ಸೋಮಶೇಖರ್, ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಾ ಉಪಾಧ್ಯಾ, ಪದಾಧಿಕಾರಿ ಎಂ.ಎನ್.ಮಂಜುಳಾ, ಎ.ದೇವದಾಸ್, ಡಾ. ಪ್ರಮೋದ್, ಸೋಮಶೇಖರಗೌಡ, ಹನುಮಪ್ಪ, ಗೋವಿಂದ್, ಶಾಂತಾ, ಸುರೇಶ್ ಸೇರಿದಂತೆ ಹಲವರು ಇದ್ದರು.