Advertisement

5 ಗ್ರಾಮಗಳ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳಿ

12:12 PM Aug 24, 2019 | Naveen |

ಬಳ್ಳಾರಿ: ಜಿಲ್ಲೆಯಲ್ಲಿ ಸದಾ ಪ್ರವಾಹಭೀತಿ ಎದುರಿಸುತ್ತಿರುವ ಬ್ಯಾಲಹುಣಸಿ, ಅಂಗೂರು, ಮೊದಲಘಟ್ಟ, ಹರವಿ ಮತ್ತು ಹಚ್ಚೊಳ್ಳಿ ಗ್ರಾಮಗಳನ್ನು ಶೀಘ್ರ ಸ್ಥಳಾಂತರಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರವಾಹ, ಬರಪರಿಸ್ಥಿತಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಗ್ರಾಮಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ ಟೆಕ್ನಿಕಲ್ ತಂಡ ನೀಡಿರುವ ವರದಿ ಅನ್ವಯ ಕೂಡಲೇ ಸ್ಥಳಾಂತರ ಮಾಡುವುದಕ್ಕೆ ಮುಂದಾಗಬೇಕು. ಅಗತ್ಯ ಜಾಗ ಗುರುತಿಸಿರುವ ಕಡೆ ಮೂಲಸೌಕರ್ಯ ಕಲ್ಪಿಸಬೇಕು. ನೊಂದಿರುವ ಸಂತ್ರಸ್ತರ ನೆರವಿಗೆ ಸರ್ಕಾರವಿದೆ ಎಂಬ ವಿಶ್ವಾಸ ಮೂಡಿಸಬೇಕು. ಈ ಗ್ರಾಮಗಳ ಸ್ಥಳಾಂತರಕ್ಕೆ ಸಂಬಂಧಿಸಿದ ವರದಿ ಮತ್ತು ಖರ್ಚು-ವೆಚ್ಚಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ಸರ್ಕಾರಕ್ಕೆ ಕಳುಹಿಸಿಕೊಟ್ಟಲ್ಲಿ ಅದನ್ನು ನಾನೇ ಮುಂದೆ ನಿಂತು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ತುಂಗಾಭದ್ರಾ ನದಿಯಿಂದ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಮನೆಗಳ ಹಾನಿ, ಬೆಳೆ ನಷ್ಟ, ಮೂಲಸೌಕರ್ಯ ಸೇರಿದಂತೆ ವಿವಿಧ ರೀತಿಯ ಹಾನಿಗಳು ಸೇರಿ 20 ಕೋಟಿ ರೂ. ಗಳಷ್ಟು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಎರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 11 ಗಂಜಿಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಅವುಗಳನ್ನು ಈಗ ಸ್ಥಗಿತಗೊಳಿಸಲಾಗಿದೆ. ಪ್ರವಾಹದಿಂದ ಬಟ್ಟೆ-ಬರೆ ಹಾಗೂ ದಿನಬಳಕೆ ವಸ್ತುಗಳು ಕಳೆದುಕೊಂಡ ಹಡಗಲಿ ಮತ್ತು ಹರಪನಳ್ಳಿ ತಾಲೂಕುಗಳಲ್ಲಿನ 186 ಕುಟುಂಬಗಳಿಗೆ 18.60ಲಕ್ಷ ರೂ. ಪರಿಹಾರವನ್ನು ಈಗಾಗಲೇ ವಿತರಣೆ ಮಾಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಒಟ್ಟು 3507.66 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. 3671 ರೈತರು ಬೆಳೆನಷ್ಟದಿಂದ ಬಾಧಿತರಾಗಿದ್ದಾರೆ ಎಂದರು.

ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್ ಮಾತನಾಡಿ, ಜಿಲ್ಲೆಯಲ್ಲಿ ಜೆಸ್ಕಾಂ ಇಲಾಖೆಯ ಒಟ್ಟು 1301 ವಿದ್ಯುತ್‌ ಕಂಬಗಳು, 264 ವಿದ್ಯುತ್‌ ಪರಿವರ್ತಕಗಳು ಮತ್ತು 107 ಕಿ.ಮೀ. ಉದ್ದ ಕಂಡಕ್ಟರ್‌ ಲೈನ್‌ ಹಾಳಾಗಿದ್ದು ಸುಮಾರು ರೂ.491.80 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 8 ಮಲ್ಟಿ ವಿಲೇಜ್‌ ಸ್ಕೀಮ್ಸ್‌ ಮತ್ತು 10 ಸಿಂಗಲ್ ವಿಲೇಜ್‌ ಸ್ಕೀಂ ಪ್ರವಾಹದಿಂದ ಹಾಳಾಗಿದ್ದು, ಇದಕ್ಕೆ ಈಗಾಗಲೇ 10 ಕಾಮಗಾರಿಗಳನ್ನು ರೂ.13.80 ಲಕ್ಷರೂಗಳಿಗೆ ಎಸ್‌ಡಿಆರ್‌ಎಫ್‌ ನಿಧಿಯಡಿ ಆಡಳಿತಾತ್ಮಕ ಮಂಜೂರಾತಿ ನೀಡಿ ರೂ. 10.35 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಶಾಲಾ ಕಟ್ಟಡಗಳು, ಬ್ರಿಡ್ಜ್, ಕುಡಿಯುವ ನೀರಿನ ಕಾಮಗಾರಿಗಳು, ತೆಪ್ಪೆಗಳು ಸೇರಿ ಅಂದಾಜು ರೂ.1.86 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸಭೆಗೆ ವಿವರಿಸಿದರು.

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ (08392-277209) ತೆರೆದು ದಿನದ 24 ಗಂಟೆಗಳ ಕಾಲ ಸಿಬ್ಬಂದಿ ನಿಯೋಜಿಸಿ ದೂರುಗಳನ್ನು ಸ್ವೀಕರಿಸಲಾಗಿದೆ. ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆದು ಸಿಬ್ಬಂದಿ ನಿಯೋಜಿಸಿ ಕಾರ್ಯನಿರ್ವಹಿಸಲಾಗಿದೆ ಎಂದರು.

Advertisement

39 ಗ್ರಾಮಗಳಲ್ಲಿ ಟ್ಯಾಂಕರ್‌ ನೀರು: ಪ್ರಸ್ತುತ ಜಿಲ್ಲೆಯಲ್ಲಿ 39 ಗ್ರಾಮಗಳಲ್ಲಿ 60 ಟ್ಯಾಂಕರ್‌ ಬಳಸಿ ದಿನಕ್ಕೆ 106 ಟ್ರಿಪ್ಸ್‌ ನೀರು ಪೂರೈಸಲಾಗುತ್ತಿದೆ. 199 ಗ್ರಾಮಗಳಲ್ಲಿ 288 ಖಾಸಗಿ ಬೋರ್‌ವೆಲ್ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಎಸ್‌ಡಿಆರ್‌ಎಫ್‌ ನಿಧಿಯಡಿ ಒಟ್ಟು 69 ಕುಡಿಯುವ ನೀರಿನ ಕಾಮಗಾರಿಗಳನ್ನು ರೂ. 57.15 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ ಎಂದ ಡಿಸಿ ನಕುಲ್, ಜುಲೈ ಅಂತ್ಯದವರೆಗೆ ಖಾಸಗಿ ಟ್ಯಾಂಕರ್‌ಗಳಿಗೆ ಮತ್ತು ಖಾಸಗಿ ಬೋರ್‌ವೆಲ್ಗಳಿಗೆ ಹಣ ಪಾವತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 13 ಮೇವು ಬ್ಯಾಂಕ್‌ ಮತ್ತು 9 ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಜಿಲ್ಲೆಯಲ್ಲಿ 11 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿರುತ್ತದೆ. ಒಟ್ಟು 8683 ರೈತರುಗಳಿಗೆ 34694 ಮೇವಿನ ಕಿರು ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಶೇಖರರೆಡ್ಡಿ, ಈ. ತುಕಾರಾಂ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಅಪರ ಮುಖ್ಯಕಾರ್ಯದರ್ಶಿ ಡಾ| ಸಂದೀಪ್‌ ದವೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವಗುಪ್ತಾ, ಜಿಪಂ ಸಿಇಒ ಕೆ. ನಿತೀಶ್‌, ಎಸ್ಪಿ ಸಿ.ಕೆ.ಬಾಬಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next