ಬಳ್ಳಾರಿ: ಭವಿಷ್ಯನಿಧಿ ವಂತಿಗೆದಾರರ ಮತ್ತು ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿಯನ್ನು 7500 ರೂ.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಭವಿಷ್ಯನಿಧಿ ವಂತಿಗೆದಾರರು, ಪಿಂಚಣಿದಾರರ ಸಂಘಟನೆ ಮುಖಂಡರು ನಗರದ ಭವಿಷ್ಯನಿಧಿ ಆಯುಕ್ತರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಎಸ್‌ಪಿ ವೃತ್ತದಿಂದ ಭವಿಷ್ಯನಿಧಿ ಆಯುಕ್ತರ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾನಿರತರು ಸಮೀಪದ ಪಾರ್ವತಿ ನಗರ ಮುಖ್ಯರಸ್ತೆಯಲ್ಲಿನ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ ತೆರಳಿ ಆಯುಕ್ತ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮಾರುಕಟ್ಟೆ ಬೆಲೆಗಳು ಶರವೇಗದಲ್ಲಿ ಏರುತ್ತಿವೆ. ಪರಿಣಾಮ ನಿವೃತ್ತ ಕಾರ್ಮಿಕ ಪಿಂಚಣಿದಾರರ ಬದುಕು ದುಸ್ತರವಾಗಿದೆ. ನಿವೃತ್ತ ಕಾರ್ಮಿಕರಿಂದ ಪಡೆದ ವಂತಿಗೆ ಹಣದಲ್ಲಿ ಶೇ. 33.33ರಷ್ಟು ಅವರಿಗೆ ಸಾಲದ ರೂಪದಲ್ಲಿ ನೀಡಿ, ಕಂತಿನ ರೂಪದಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ. ಸಾಲ ತೀರಿದ ಮೇಲೂ ಮೂಲ ಪಿಂಚಣಿ ನೀಡುತ್ತಿಲ್ಲ. ಇದು ಕಮ್ಯುಟೇಷನ್ ಕಾನೂನಿನ ಕಡಿತ ಮಾಡದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ, ಭವಿಷ್ಯನಿಧಿ ಅಕಾರಿಗಳು ಪಾಲಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.
ರಾಜ್ಯಸಭಾದ 147ನೇ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. 1971 ಮತ್ತು ಇಪಿಎಸ್ 1995 ಎರಡೂ ಯೋಜನೆಗಳಲ್ಲಿ ವಂತಿಗೆ ನೀಡಿದ ಕಾರ್ಮಿಕರಿಗೆ ಎರಡೂ ಯೋಜನೆಗಳ ಪ್ರತ್ಯೇಕ ಲೆಕ್ಕಾಚಾರ ಮಾಡಿ ಪಿಂಚಣಿ ನಿಗದಿಪಡಿಸಬೇಕು. ಮಾರುಕಟ್ಟೆ ಬೆಲೆಗನು ಗುಣವಾಗಿ ಪಿಂಚಣಿ ನಿಗದಿಸಬೇಕು. 2001ರಿಂದ ಈವರೆಗಿನ ಬಾಕಿ ಹಣ ನೀಡಬೇಕು. 20 ವರ್ಷ ಸೇವೆ ಸಲ್ಲಿಸಿದ ಎಲ್ಲರಿಗೂ ಎರಡು ವೇಟೇಜ್ ಕೊಡಬೇಕು. ಉಚಿತ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಬೆಲ್ಡೋಣ, ಸಂಘಟನೆಯ ಕಾರ್ಯಾಧ್ಯಕ್ಷ ಪಂಪಾಪತಿ, ಖಜಾಂಚಿ ಎರ್ರಿಸ್ವಾಮಿ ಸೇರಿದಂತೆ ಸಂಘಟನೆಯ ಹಲವಾರು ಜನರು ಇದ್ದರು.