Advertisement

ನಾಳೆಯಿಂದ ಸಾವಯವ ಕೃಷಿ ಕಾರ್ಯಾಗಾರ

04:31 PM Jun 14, 2019 | Team Udayavani |

ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಎರ್ರಿತಾತ ದೇವಸ್ಥಾನದ ಪ್ರಾಂಗಣದಲ್ಲಿ ಜೂ.15, 16 ರಂದು ಎರಡು ದಿನಗಳ ಕಾಲ ರೈತನ ಸಮೃದ್ಧಿ ಮತ್ತು ನೆಲ, ಜಲದ ಕುರಿತು ಜನಜಾಗೃತಿಗಾಗಿ ನೈಸರ್ಗಿಕ ಕೃಷಿ ವಿಜ್ಞಾನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರಿನ ಉಳುಮೆ ಪ್ರತಿಷ್ಠಾನದ, ನೈಸರ್ಗಿಕ ಕೃಷಿಕ ಟಿ.ಜಿ.ಎನ್‌.ಅವಿನಾಶ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ರೈತರು ಮಳೆಯ ಕೊರತೆ, ಅಂತರ್ಜಲ ಕುಸಿತ ಸೇರಿ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಅನಿಯಮಿತವಾಗಿ ರಾಸಾಯನಿಕ ಬಳಕೆಯಿಂದಾಗಿ ಸುಸ್ಥಿರ ಸಾವಯವ ಕೃಷಿ ಪದ್ಧತಿಯೆಂಬುದೇ ಮರೀಚಿಕೆಯಾಗುತ್ತಿದೆ. ಹಾಗಾಗಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಮುಂದಿನ ದಿನಗಳಲ್ಲಿ ರೈತರಿಗೆ ಮರಗಳ ಬೆಳೆಸುವ ಆಧಾರಿತ ಕೃಷಿ ಪದ್ಧತಿಯೊಂದೇ ಪರಿಹಾರ ಮಾರ್ಗವಾಗಿದೆ. ಕೃಷಿ ಜಮೀನುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಮಳೆ ಪ್ರಮಾಣ ಹೆಚ್ಚುತ್ತದೆ. ಮರಗಳಲ್ಲಿ 107 ಹಣ್ಣಿನ ಮರಗಳು, 90 ತರಕಾರಿ ಗಿಡಗಳಿವೆ. ಸಮುದ್ರ ತೀರದಲ್ಲಿ ಬೆಳೆಯುವ ಏರೋ ಸೌತ್ಸ್ ಬೆಳೆಯಬೇಕಾಗಿದೆ. ಈ ಮರಗಳು ಮಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸುರಿಸುತ್ತವೆ. ಸುರಿದ ಮಳೆಯ ತೇವಾಂಶವನ್ನು ಕಾಪಾಡುತ್ತವೆ. ಇಂಥ ವೈಜ್ಞಾನಿಕ ಕೃಷಿ ಪದ್ಧತಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ವಿವರಿಸಿದರು.

ಕಾರ್ಯಾಗಾರದಲ್ಲಿ ಬಿದ್ದ ಮಳೆಯನ್ನು ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವ ವಿಧಾನ, ಸಸ್ಯ ಬೆಳವಣಿಗೆಯಲ್ಲಿ ಬೆಳಕಿನ ಮಹತ್ವ, ಹ್ಯೂಮಸ್‌ ಮತ್ತು ಸಾವಯವ ಇಂಗಾಲದ ಮಹತ್ವ (ಭೂಮಿಯನ್ನು ಸಹಜವಾಗಿ ಬಲಗೊಳಿಸುವಿಕೆ), ಭೂಮಿಯಲ್ಲಿ ಸಹಜವಾಗಿ ನೈಸರ್ಗಿಕ ಉತ್ಪತ್ತಿ ಮಾಡುವ ವಿಧಾನ, ದ್ವಿದಳ ಧಾನ್ಯಗಳ ಮಹತ್ವ ಮತ್ತು ನಾಟಿ ಬೀಜ ಆಯ್ಕೆ ಮಾಡುವ ವಿಧಾನ, ಸಂರಕ್ಷಣೆ ಮಾಡುವ ವಿಧಾನ, ನಮ್ಮ ಭೂಮಿಯಲ್ಲಿ ಸಹಜ ಎರೆಹುಳು ಮತ್ತು ಸೂಕ್ಷ್ಮ ಜೀವಿಗಳ ಮಹತ್ವ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಪ್ರಗತಿಪರ ರೈತರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಬಿ.ಯು.ಯರ್ರಿಸ್ವಾಮಿ, ಕಮ್ಮರಚೇಡು ಈಶ್ವರಪ್ಪ, ಜಿ.ನಾಗರಾಜ, ರಾಮಕೃಷ್ಣ, ಕೆ.ಮಾರೆಣ್ಣ, ಕೆ.ಶಿವಪ್ಪ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next