ಬಳ್ಳಾರಿ: ತಾಲೂಕಿನ ಸಂಗನಕಲ್ಲು ಗ್ರಾಮದ ಸಮೀಪ ವಿಸ್ಡ್ಂ ಲ್ಯಾಂಡ್ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಿಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧದ ನಡುವೆಯೂ ಪ್ರಾಧಿಕಾರ, ಸರ್ವೇ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಸಮ್ಮುಖ, ಪೊಲೀಸ್ ಬಿಗಿ ಭದ್ರತೆಯಲ್ಲಿ ಭೂ ಸಮೀಕ್ಷಾ ಕಾರ್ಯ ಶನಿವಾರ ನಡೆಸಿದರು.
ಬೀದರ್‌ನಿಂದ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 150ಎಗೆ ನಗರ ಹೊರವಲಯದ ಸಿರುಗುಪ್ಪ ರಸ್ತೆಯಿಂದ ಅನಂತಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ ನಿರ್ಮಾಣಕ್ಕೆ ವರ್ಷದ ಹಿಂದೆ ಯೋಜನೆ ರೂಪಿಸಲಾಗಿತ್ತು. ಅದರನ್ವಯ ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ವಿಸ್ಡ್ಂಲ್ಯಾಂಡ್ ಶಾಲೆ ಬಳಿಯ ನೀರಾವರಿ ಜಮೀನುಗಳ ಮಧ್ಯೆ ರಸ್ತೆ ನಿರ್ಮಾಣವಾಗಿ ಅನಂತಪುರ-ಸಿರುಗುಪ್ಪ ರಸ್ತೆಗೆ ಸಂಪರ್ಕ ಕಲ್ಪಿಸಬೇಕು. ಈ ರಸ್ತೆ ನಿರ್ಮಾಣಕ್ಕೆ ಇದೀಗ ಜಮೀನು ಗುರುತಿಸುವಿಕೆ ಕಾರ್ಯವನ್ನು ಅಧಿಕಾರಿಗಳು ಕೈಗೊಳ್ಳುತ್ತಿದ್ದು, ಇದಕ್ಕೆ ಸಂಗನಕಲ್ಲು ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಮೀನು ಸಣ್ಣಸಣ್ಣ ಹಿಡುವಳಿದಾರರದ್ದಾಗಿದೆ. ಅಲ್ಲದೇ, ವಾಜಪೇಯಿ ಬಡಾವಣೆಯಲ್ಲಿ ಬಡವರು ಕೂಡಿಟ್ಟ ಹಣದಲ್ಲಿ ನಿವೇಶನ ಖರೀದಿಸಿದ್ದಾರೆ. ಇದೀಗ ಏಕಾಏಕಿ ಜಮೀನು ರಸ್ತೆ ನಿರ್ಮಾಣಕ್ಕೆ ಬೇಕು ಎಂದರೆ ಎಲ್ಲರೂ ಬೀದಿಪಾಲಾಗುತ್ತಾರೆ. ಇಲ್ಲಿ ರಸ್ತೆ ನಿರ್ಮಾಣ ಮಾಡುವುದು ಬೇಡ. ನೀವು ನಿಮ್ಮ ಇಲಾಖೆಯ ಮೇಲಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಕಾನೂನು ರೀತಿ ನಾವು ಕೆಲಸ ಮಾಡುತ್ತಿದ್ದೇವೆ ಅಷ್ಟೇ. ಮೇಲಧಿಕಾರಿಗಳ ಆದೇಶ ಮೀರುವಂತಿಲ್ಲ. ಬೇಕಿದ್ದರೆ ನೀವು ಜಿಲ್ಲಾಧಿಕಾರಿಗಳ ಬಳಿಗೆ ಹೋಗಿ ಕೆಲಸ ನಿಲ್ಲಿಸುವಂತೆ ಹೇಳಿಸಿ ಎಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಕೆಲಹೊತ್ತು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಕಾನೂನು ಪ್ರಕಾರ ರಾಷ್ಟ್ರೀಯ ಹೆದ್ದಾರಿಯನ್ನು ನಗರದಿಂದ 9 ಕಿಮೀ ದೂರದಲ್ಲಿ ನಿರ್ಮಿಸಬೇಕು. ಆದರೆ, ನೀವು ನಗರದಲ್ಲೇ ನಿರ್ಮಿಸಲು ಮುಂದಾಗುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಮೊದಲು ಜಮೀನು ಮಾಲೀಕರಿಗೆ ನೋಟಿಸ್ ನೀಡಬೇಕು. ಅದರ ಆಧಾರದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಆದರೆ, ನೋಟಿಸ್ ನೀಡದೇ ಏಕಾಏಕಿ ಸರ್ವೇ ಕಾರ್ಯವನ್ನು ಹೇಗೆ ಮಾಡುತ್ತೀರಿ ಎಂದು ರೈತರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸರ್ವೇ ಕಾರ್ಯ ತಡೆಯಲು ಮುಂದಾದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪಾಷಾ, ಜಮೀನು, ನಿವೇಶನ ಮಾಲೀಕರು, ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ, ಪ್ರಯೋಜನ ಆಗಲಿಲ್ಲ. ಕೊನೆಗೆ ಕೆಲ ಮುಖಂಡರು ಜಿಲ್ಲಾಧಿಕಾರಿ ಭೇಟಿಗೆ ತೆರಳಿದರು. ಜಿಲ್ಲಾಧಿಕಾರಿ, ನ್ಯಾಯಾಲಯದ ಆದೇಶ ಇರುವ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಿಲ್ಲಿಸಲು ಬರುವುದಿಲ್ಲ. ನೀವೇನಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೊನೆಗೂ ಸರ್ವೇ ಕಾರ್ಯ ಮುಂದುವರಿಸಿದರು.
ಈ ಸಂದರ್ಭದಲ್ಲಿ ಸಂಗನಕಲ್ಲು ಗ್ರಾಪಂ ಅಧ್ಯಕ್ಷ ವೀರೇಶಪ್ಪ, ಪಾಲಾಕ್ಷಿಗೌಡ, ರವಿಕುಮಾರ್, ತಿಪ್ಪೇರುದ್ರ, ರುದ್ರಪ್ಪ, ಈಶ್ವರರಾವ್, ಕಟ್ಟೇಗೌಡ ಸೇರಿದಂತೆ ಸಂಗನಕಲ್ಲು ಗ್ರಾಮಸ್ಥರು, ಬಾಜಪೇಯಿ ಬಡಾವಣೆಯ ನಿವೇಶನದಾರರು ಸ್ಥಳದಲ್ಲಿದ್ದರು.