Advertisement

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

10:36 AM May 20, 2019 | Naveen |

ಬಳ್ಳಾರಿ: ಆರೂವರೆ ದಶಕಗಳ ಕಾಲ ಒಂದಾಗಿ ಜೀವನ ಸಾಗಿಸಿದ ದಂಪತಿ ಸಾವಿನಲ್ಲೂ ಒಂದಾದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. ನಗರದ 17ನೇ ವಾರ್ಡ್‌ ವ್ಯಾಪ್ತಿಯ ಬಿಸಿಲಹಳ್ಳಿ ಗ್ರಾಮದ ಬೆಳ್ಳಿಕಟ್ಟೆ ಬಸಪ್ಪ (86) ಬೆಳ್ಳಿ ಲಕ್ಷ್ಮಮ್ಮ (82)ಭಾನುವಾರ ಬೆಳಗಿನ ಜಾವ 2 ಗಂಟೆ ಅಂತರದಲ್ಲಿ ಇಹಲೋಕ ತ್ಯಜಿಸುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ. ಬೆಳ್ಳಿಕಟ್ಟೆ ಬಸಪ್ಪನಿಗೆ 20 ವರ್ಷ, ಬೆಳ್ಳಿ ಲಕ್ಷ್ಮಮ್ಮಳಿಗೆ 16 ವರ್ಷವಾಗಿದ್ದಾಗ ಹಿರಿಯರ ನಿಶ್ಚಯದಂತೆ ಮದುವೆಯಾಗಿದ್ದರು. ಬರೋಬ್ಬರಿ 66 ವರ್ಷಗಳ ಕಾಲ ಒಂದಾಗಿ ಜೀವನ ಸಾಗಿಸಿದ್ದಾರೆ.

Advertisement

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಈ ವೃದ್ಧ ದಂಪತಿ ಹಲವು ತಿಂಗಳಿಂದ ಹಾಸಿಗೆ ಹಿಡಿದಿದ್ದರು. ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವೃದ್ಧ ಬಸಪ್ಪನ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಆಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವಷ್ಟರಲ್ಲೇ ಕೊನೆಯುಸಿರೆಳೆದರು. ಇನ್ನು ಲಕ್ಷ್ಮಮ್ಮ ಸದಾ ಅಜ್ಜನ ಪಕ್ಕದಲ್ಲಿರುತ್ತಿದ್ದರು. ಅಜ್ಜ ತೀರಿಹೋದ ವಿಷಯವನ್ನು ಮಕ್ಕಳು, ಮೊಮ್ಮಕ್ಕಳು ಹೇಳುತ್ತಿದ್ದಂತೆ ದುಃಖತಪ್ತಳಾದ ವೃದ್ಧೆ ಲಕ್ಷ್ಮಮ್ಮ 2 ತಾಸು ಕಣ್ಣೀರಿಟ್ಟಿದ್ದಾರೆ. ಇದರಿಂದ ನಿತ್ರಾಣರಾಗಿ ಕಣ್ಣೀರಿಡುತ್ತಲೇ ಮೃತ ಪತಿಯ ಪಕ್ಕದಲ್ಲೇ ಮಲಗಿ ಅಲ್ಲಿಯೇ ಕೊನೆಯಸಿರೆಳೆದಿದ್ದಾರೆ. ಒಟ್ಟು 9 ಮಕ್ಕಳನ್ನು ಪಡೆದಿದ್ದ ಈ ದಂಪತಿ ಓರ್ವ ಮಗನನ್ನು ವಿದ್ಯುತ್‌ ಅವಘಡದಲ್ಲಿ ಕಳೆದುಕೊಂಡಿದ್ದರು. ಮೂವರು ಪುತ್ರರು, ಐವರು ಪುತ್ರಿಯರು ಇದ್ದಾರೆ. ನಿವೃತ್ತ ಶಿರಸ್ತೇದಾರ್‌ ಆಗಿದ್ದ ಬೆಳ್ಳಿಕಟ್ಟೆ ಬಸಪ್ಪ ಕೊನೆಯ ದಿನಗಳಲ್ಲಿ ಪತ್ನಿ, ಮರಿ ಮೊಮ್ಮಕ್ಕಳ ಜತೆ ಕಾಲ ಕಳೆಯುತ್ತಿದ್ದರು. ಸ್ವಗ್ರಾಮ ಬಿಸಿಲಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಮೃತ ದಂಪತಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next