Advertisement

ಅಕ್ರಮ ಬಯಲಿಗೆಳೆದ ಅಧಿಕಾರಿಗೆ ಕಡ್ಡಾಯ ರಜೆ ಖಂಡನೀಯ

11:36 AM Aug 05, 2019 | Naveen |

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪನಿ ಗಣಿ ಅಕ್ರಮ ಬಯಲಿಗೆಳೆದ ನೆರೆಯ ಆಂಧ್ರಪ್ರದೇಶದ ಐಎಫ್‌ಎಸ್‌ ಅಧಿಕಾರಿ ಕಲ್ಲೋರ್‌ ಬಿಸ್ವಾಸ್‌ ಅವರನ್ನು ಕಡ್ಡಾಯ ರಜೆ ಪಡೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತು ಕೇಂದ್ರ ಸರಕಾರ ಆಂಧ್ರ ಸರ್ಕಾರಕ್ಕೆ ಆದೇಶದ ಪ್ರತಿ ಕಳುಹಿಸಿದ್ದು ಖಂಡನೀಯ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್‌ ಹೇಳಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಐಎಫ್‌ಎಸ್‌ ಅಧಿಕಾರಿಯಾಗಿದ್ದ ಕಲ್ಲೋರ್‌ ಬಿಸ್ವಾಸ್‌ ಅವರು, ಆಂಧ್ರದಲ್ಲಿ ದಿ| ವೈ.ಎಸ್‌. ರಾಜಶೇಖರರೆಡ್ಡಿಯವರು ಮುಖ್ಯಮಂತ್ರಿಯಾಗಿದ್ದಾಗ ಒಎಂಸಿ ಕಂಪನಿ ಪರವಾಗಿ ಕಾರ್ಯನಿರ್ವಹಿಸಿದ್ದರು. ರಾಜಶೇಖರ ರೆಡ್ಡಿ ನಿಧನದ ಬಳಿಕ ಮುಖ್ಯಮಂತ್ರಿಯಾದ ರೋಷಯ್ಯ ಅವಧಿಯಲ್ಲಿ ತನ್ನ ಕಾರ್ಯವೈಖರಿ ಬದಲಿಸಿಕೊಂಡಿದ್ದ ಕಲ್ಲೋರ್‌ ಬಿಸ್ವಾಸ್‌, ಆಗ ಒಎಂಸಿ ಕಂಪನಿ ವಿರುದ್ಧ ವಿಸ್ತ್ರತ ವರದಿಯನ್ನು ಸಿದ್ಧಪಡಿಸಿದ್ದರು. ಅಂಥ ಅಧಿಕಾರಿಯನ್ನೇ ಇದೀಗ ಕೇಂದ್ರ ಸರ್ಕಾರ ಕಡ್ಡಾಯ ರಜೆ ಪಡೆಯುವಂತೆ ಸೂಚಿಸಿ, ಆಂಧ್ರ ಸರ್ಕಾರಕ್ಕೆ ಆದೇಶ ಪತ್ರ ರವಾನಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಟಪಾಲ್ ಗಣೇಶ್‌ ಆರೋಪಿಸಿದರು.

2008ರಲ್ಲಿ ಗಣಿ ಅಕ್ರಮದ ರೂವಾರಿಯಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಸಾವಿರಾರು ಕೋಟಿ ರೂ.ಗಳ ಅಕ್ರಮ ಆಸ್ತಿ ಸಂಪಾದನೆಯಲ್ಲೂ ಈ ಅಧಿಕಾರಿ ಪಾಲಿದ್ದು, ಅವರ ಅಕ್ರಮ ಆಸ್ತಿಯನ್ನು ಬಯಲಿಗೆಳೆಯುವ ಕಾರ್ಯಕ್ಕೂ ಅವರು ಮುಂದಾಗಿದ್ದರು. ಪರ, ವಿರೋಧವಾಗಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಯನ್ನು ಕಡ್ಡಾಯ ರಜೆ ಪಡೆಯುವಂತೆ ಸೂಚಿಸಿರುವುದೇ ಯಕ್ಷಪ್ರಶ್ನೆಯಾಗಿದೆ ಎಂದು ದೂರಿದರು.

ಕಲ್ಲೋರ್‌ ಬಿಸ್ವಾಸ್‌ ಅವರು, ನೆರೆಯ ಅನಂತಪುರದ ಡಿಎಫ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಜನಾರ್ದನ ರೆಡ್ಡಿಗೆ ಸೇರಿದ ಓಬಳಾಪುರಂ ಗಣಿ ಕಂಪನಿಗೆ ಸಂಬಂಧಿಸಿದ ವಿವಾದಿತ ವಿಷಯವನ್ನು ನಿರ್ವಹಿಸುವಾಗ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೇವಾ ದಾಖಲೆಯಲ್ಲಿ ಉಲ್ಲೇಖೀಸಲಾಗಿದೆ ಎಂದ ಟಪಾಲ್ ಗಣೇಶ್‌, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಕರ್ತವ್ಯದಿಂದ ವಿಮುಖರಾಗಿದ್ದರು ಎಂಬ ಕಾರಣವೊಡ್ಡಿ ಅವರನ್ನು ಕಡ್ಡಾಯ ರಜೆ ಪಡೆಯುವಂತೆ ಸೂಚಿಸಿರುವ ಕೇಂದ್ರ ಸರ್ಕಾರ ಕ್ರಮ ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ವಿರುದ್ಧ ಅಸಮಾಧಾನ
1991ನೇ ಬ್ಯಾಚ್‌ನ ಆಂಧ್ರ ಪ್ರದೇಶ ಕೇಡರ್‌ ಅಧಿಕಾರಿಯಾಗಿದ್ದ ಕಲ್ಲೋರ್‌ ಬಿಸ್ವಾಸ್‌ ಅವರ ಸೇವಾ ದಾಖಲೆ ವಿವರಗಳನ್ನು ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಇದರ ಆಧಾರದ ಮೇಲೆ ಬಿಸ್ವಾಸ್‌ ಅವರಿಗೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಆಂಧ್ರದಲ್ಲಿ ವೈ.ಎಸ್‌.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಓಬಾಳಪುರಂ ಮೈನಿಂಗ್‌ ಕಂಪನಿಗೆ ಆಂಧ್ರದಲ್ಲಿ ಉಕ್ಕು ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಲಾಗಿತ್ತು. ಈ ಇಬ್ಬರ ನಡುವಿನ ಸಂಬಂಧವನ್ನು ಕಲ್ಲೋರ್‌ ಬಿಸ್ವಾಸ್‌ ಅವರು ಮೊದಲ ಬಾರಿಗೆ ಬಹಿರಂಗ ಪಡಿಸಿದ್ದರು. ಹಾಗಾಗಿ ಕಲ್ಲೋರ್‌ ಬಿಸ್ವಾಸ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಅವರು, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next