Advertisement

ನಾಳೆ ಅಂಬೇಡ್ಕರ್‌ ಸಮಗ್ರ ರಾಷ್ಟ್ರಾಭಿವೃದ್ಧಿ ವಿಚಾರ ಸಂಕಿರಣ

05:27 PM Aug 31, 2019 | Naveen |

ಬಳ್ಳಾರಿ: ತಳ ಸಮುದಾಯಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೆ.1 ರಂದು ನಗರದಲ್ಲಿ ಸಂವಿಧಾನ ಮತ್ತು ಡಾ. ಬಿ.ಆರ್‌.ಅಂಬೇಡ್ಕರ್‌ ಸಮಗ್ರ ರಾಷ್ಟ್ರಾಭಿವೃದ್ಧಿ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಉಪಾಧ್ಯಕ್ಷ, ಸಮ ಸಮಾಜ ನಿರ್ಮಾಣ ಸಂಸ್ಥೆಯ ಸಂಸ್ಥಾಪಕ ಜಿ.ಶಿವಕುಮಾರ್‌ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ಸಮಸಮಾಜ ನಿರ್ಮಾಣ ಸಂಸ್ಥೆಯ ವತಿಯಿಂದ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗುತ್ತದೆ. ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರು 1984ರಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸ್ಥಾಪಿಸಿದ್ದರು. ಜಮ್ಮು ಕಾಶ್ಮೀರ, ಉತ್ತರ ಪ್ರದೇಶದ ಐಎಎಸ್‌ ಅಧಿಕಾರಿಗಳು ಸಹ ಅಕಾಡೆಮಿ ಸ್ಥಾಪನೆಯಲ್ಲಿ ಭಾಗವಹಿಸಿದ್ದರು. ತಳಸಮುದಾಯಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಂವಿಧಾನದ ಬಗ್ಗೆ ಶೋಷಿತ ಸಮುದಾಯಗಳಿಗೆ ಎಷ್ಟರ ಮಟ್ಟಿಗೆ ಅರಿವಿದೆ ಎಂಬುದನ್ನು ತಿಳಿಸಿಕೊಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.1 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಈಜುಕೊಳ ಸಭಾಂಗಣದಲ್ಲಿ ಸಂವಿಧಾನ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಸಮಗ್ರ ರಾಷ್ಟ್ರಾಭಿವೃದ್ಧಿ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿಚಾರ ಸಂಕಿರಣವನ್ನು ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಉದ್ಭಾಟಿಸುವರು. ಅಕಾಡೆಮಿ ರಾಜ್ಯಾಧ್ಯಕ್ಷ ಪ್ರೊ. ಚೆಲುವರಾಜು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಕಾಡೆಮಿ ರಾಷ್ಟ್ರೀಯ ಕಾರ್ಯದರ್ಶಿ ಸುಭಾಷ್‌ ಎಚ್.ಕಾನಡೆ, ಚಿಂತಕ ಮತ್ತು ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್‌, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಡಾ.ಆರ್‌.ಮೋಹನ್‌ರಾಜ್‌, ವಿಎಸ್‌ಕೆ ವಿವಿ ಕುಲಪತಿ ಸಿದ್ದು ಅಲಗೂರು, ಅಕಾಡೆಮಿ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸಿ.ವೆಂಕಟೇಶ್‌, ರಾಜ್ಯ ಉಪಾಧ್ಯಕ್ಷ ಕೆ.ಎಸ್‌.ಶಿವರಾಮು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಕುಂದರಗಿ, ಸಮಸಮಾಜ ನಿರ್ಮಾಣ ಸಂಸ್ಥೆಯ ರಾಜ್ಯಾಧ್ಯಕ್ಷೆ ಸಿ.ಪದ್ಮಾವತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ್‌, ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಸ್‌.ಚಿದಾನಂದ, ಹಿರಿಯ ರಂಗಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರು, ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎನ್‌.ಗಿರಿಮಲ್ಲಪ್ಪ ಅವರು ಭಾಗವಹಿಸಲಿದ್ದಾರೆ. ಇವರೊಂದಿಗೆ ಅಕಾಡೆಮಿ ವತಿಯಿಂದ ರಾಜ್ಯಾದ್ಯಂತ 40ಕ್ಕೂ ಹೆಚ್ಚು ಸದಸ್ಯರು ಬರಲಿದ್ದಾರೆ. ಜತೆಗೆ ಸ್ಥಳೀಯವಾಗಿಯೂ ಹಲವಾರು ಜನರು, ಹಂಪಿ ಕನ್ನಡ ವಿವಿ, ವಿಎಸ್‌ಕೆ ವಿವಿಗಳಿಂದಲೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದವರು ವಿವರಿಸಿದರು.

ವಿಚಾರ ಸಂಕಿರಣ: ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ವಹಿಸುವರು. ಸಂವಿಧಾನ ಮತ್ತು ರಾಷ್ಟ್ರಾಭಿವೃದ್ಧಿ ಕುರಿತು ಡಾ.ಆರ್‌.ಮೋಹನ್‌ ರಾಜ್‌, ಸಂವಿಧಾನ ಮತ್ತುಮಹಿಳಾ ಸಬಲೀಕರಣ ಕುರಿತು ಎನ್‌.ಡಿ.ವೆಂಕಮ್ಮ ಸಂವಿಧಾನ ಮತ್ತು ಜನಸಾಮಾನ್ಯ ಕುರಿತು ಡಾ.ವೆಂಕಟಗಿರಿ ದಳವಾಯಿ ಅವರು ಉಪನ್ಯಾಸ ನೀಡುವರು.

ಬಳಿಕ ಅಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ ರಾಷ್ಟ್ರೀಯ ಕಾರ್ಯದರ್ಶಿ ಸುಭಾಷ್‌ ಎಚ್.ಕಾನಡೆ ಅಧ್ಯಕ್ಷತೆ ವಹಿಸುವರು. ಚೆಲುವರಾಜು, ಡಾ. ಬಿ.ಕೆ.ತುಳಸಿಮಾಲಾ, ಡಾ.ಸಿ.ವೆಂಕಟೇಶ್‌, ಕೆ.ಎಸ್‌.ಶಿವರಾಮು, ಎಚ್.ಎಂ.ಕಂದರಗಿ, ಖ್ಯಾತ ಕಲಾವಿದ ಬಾಬುರಾವ್‌ ನಡೋಣಿ, ಡಿ.ಎಚ್.ಹನುಮೇಶಪ್ಪ, ಸಿ.ಚನ್ನಬಸವಣ್ಣ ಭಾಗವಹಿಸುವರು ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಉಪಾಧ್ಯಕ್ಷೆ ಎನ್‌.ಡಿ.ವೆಂಕಮ್ಮ, ಹಿರಿಯ ವಿಜ್ಞಾನ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ, ಉಲ್ಲಾಸ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next