ಬಳ್ಳಾರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರದಿಂದ ದೂರವಾಗಿದ್ದ ಶಾಸಕ ಆನಂದ ಸಿಂಗ್ ಶನಿವಾರ ಹೊಸಪೇಟೆಗೆ ಆಗಮಿಸಿದ್ದರು.
ವಿಜಯನಗರ ಶಾಸಕರು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಕಾಂಗ್ರೆಸ್ ಗ್ರಾಮೀಣ ಘಟಕದ ಪದಾಧಿಕಾರಿಗಳು ದೂರು ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಹೊಸಪೇಟೆ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಶಾಸಕ ಆನಂದ್‌ಸಿಂಗ್ ಈ ಕುರಿತು ಲಿಖೀತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಆನಂದ್‌ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಇದರಿಂದ ಅಸಮಾಧಾನಕ್ಕೊಳಗಾಗಿರುವ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ಶಾಸಕ ಆನಂದ್‌ಸಿಂಗ್ ಕಾಣೆಯಾಗಿದ್ದು, ಹುಡುಕಿಕೊಡುವಂತೆ ಅಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಆನಂದ್‌ಸಿಂಗ್ ಆಗಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುವ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೂ, ಸಹ ಶನಿವಾರ ನಗರ ಠಾಣೆಗೆ ಭೇಟಿ ನೀಡಿ ಲಿಖೀತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಪತ್ರದಲ್ಲೇನಿದೆ: ಕಳೆದ ಜುಲೈ 17 ರಂದು ಪೊಲೀಸ್ ಠಾಣೆಯಲ್ಲಿ ನಾನು ಕಾಣೆಯಾಗಿದ್ದೇನೆ ಎಂದು ಹಾಗೂ ನನ್ನ ಹುಡುಕಿಕೊಡುವಂತೆ ಕೆಲವರು ದೂರು ನೀಡಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಆದರೆ, ಕಳೆದ ಜುಲೈ 13ರ ವರೆಗೆ ನಾನು ಹೊಸಪೇಟೆಯಲ್ಲೇ ಇದ್ದೇನೆ. ಅಂದು ಸಂಜೆ ನನ್ನ ತಂದೆ ಪೃಥ್ವಿರಾಜ್ ಸಿಂಗ್ ಅವರು ಮಳೆಯಲ್ಲಿ ಜಾರಿ ಬಿದ್ದಿದ್ದರಿಂದ ಅವರಿಗೆ ಇಲ್ಲಿನ ಬಿ.ಆರ್.ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಜುಲೈ 15 ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜುಲೈ 17 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡರು. ನಂತರ ಜುಲೈ 19 ರಂದು ಮುಂದಿನ ತಪಾಸಣೆಗಾಗಿ ಪುನಃ ಆಸ್ಪತ್ರೆಗೆ ಭೇಟಿ ನೀಡಲಾಗಿದೆ. ಆದರೆ, ಮಾಧ್ಯಮಗಳಲ್ಲಿ ಪುನಃ ನಾನು ಕಾಣೆಯಾಗಿರುವ ಬಗ್ಗೆ ದೂರುಗಳನ್ನು ಗಮನಿಸಿ, ನನ್ನ ತಂದೆಯವರಿಗೆ ಪುನಃ ಆರೋಗ್ಯ ತಪಾಸಣೆ ಬಾಕಿ ಇದ್ದರೂ ಸಹ ಅವರನ್ನು ಬೆಂಗಳೂರಿನ ಮನೆಯಲ್ಲೇ ಬಿಟ್ಟು, ಠಾಣೆಗೆ ಹಾಜರಾಗಿ, ದಾಖಲಾತಿ ಸಮೇತ ಸಲ್ಲಿಸಿದ್ದೇನೆ ಎಂದವರು ಸ್ಪಷ್ಟಪಡಿಸಿದ್ದಾರೆ.