Advertisement

ಅಪ್ಪಣೆ ಇಲ್ಲದ ಭವನಗಳಿಗೆ ನೀರು-ವಿದ್ಯುತ್‌ ಕಟ್

11:19 AM Jul 11, 2019 | Naveen |

ಬಳ್ಳಾರಿ: ಪರವಾನಗಿ ಪಡೆಯದೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಭವನಗಳಿಗೆ ಕೂಡಲೇ ನೀರು, ವಿದ್ಯುತ್‌ ಸಂಪರ್ಕ ಹಾಗೂ ಇನ್ನಿತರೆ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಎಚ್ಚರಿಸಿದರು.

Advertisement

ಇಲ್ಲಿನ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ನಗರದಲ್ಲಿ 53 ಸಮುದಾಯ ಭವನಗಳು ಇದ್ದು, ಇದರಲ್ಲಿ ಎರಡು ಅಥವಾ ಮೂರು ಸಮುದಾಯ ಭವನಗಳು ಮಾತ್ರ ಪರವನಾಗಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಸಮುದಾಯ ಭವನಗಳು ಪರವನಾಗಿ ಇಲ್ಲದೇ ಮದುವೆ ಇನ್ನಿತರೆ ಕಾರ್ಯಕ್ರಮಗಳು ನಡೆಸುತ್ತಿವೆ. ಇದರಿಂದಾಗಿ ಪಾಲಿಕೆಗೆ ತೆರಿಗೆ ವಿಷಯದಲ್ಲಿ ನಷ್ಟ ಉಂಟಾಗುತ್ತಿದೆ. ಆದಕಾರಣ ಅನುಮತಿ ಪಡೆಯದೆ ಹಾಗೂ ಪÃವಾನಗಿ ಇಲ್ಲದೇ ನಡೆಸುವ ಸಮುದಾಯ ಭವನಗಳಿಗೆ ನೀರು, ವಿದ್ಯುತ್‌ ಕಡಿತಗೊಳಿಸಿ ನೋಟಿಸ್‌ ನೀಡಲಾಗುವುದು. ಪರವಾನಗಿ ಪಡೆದ ನಂತರ ಸೌಲಭ್ಯಗಳು ಕಲ್ಪಿಸಲಾಗುವುದು ಎಂದರು.

ಶುದ್ಧ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಹಾಗೂ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಗುತ್ತಿಗೆದಾರರು ಗುಣಮಟ್ಟದ ಕೆಲಸಗಳನ್ನು ಮಾಡಿ ಪೂರ್ಣಗೊಳಿಸಬೇಕು ಎಂದು ತುಷಾರಮಣಿ ಅವರು ಹೇಳಿದರು.

ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನಗಳ ನಿರ್ಮಾಣವು ತ್ವರಿತಗತಿಯಲ್ಲಿ ಸಾಗುತ್ತಿಲ್ಲ. ಕೆಲವೊಂದು ಕಡೆ ಸರಿಯಾದ ಕಾಮಗಾರಿ ನಿರ್ವಹಿಸಿರುವುದಿಲ್ಲ ಎಂಬ ದೂರುಗಳು ನಮ್ಮ ಗಮನಕ್ಕೆ ಬಂದಿದೆ. ಆ ರೀತಿಯ ಕಾಮಗಾರಿಗಳ ಪಟ್ಟಿಯನ್ನು ತರಿಸಿಕೊಳ್ಳಲಾಗುವುದು ಮತ್ತು ಅವುಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಕರೆಸಿ ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯಿಂದ ರಾಜಿಯಾಗದಂತೆ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು ಎಂದರು.

Advertisement

ವಿವಿಧ ಬಡಾವಣೆ, ನಗರ ಪ್ರದೇಶಗಳಲ್ಲಿ ಡ್ರೈನೇಜ್‌ ಬ್ಲಾಕ್‌ ಆಗಿರುವುದರಿಂದ ಸಾಕಷ್ಟು ದೂರುಗಳು ಬಂದಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ ತೊಂದರೆಗಳು ಅಧಿಕವಾಗುತ್ತಿವೆ. ಇದರ ಕುರಿತು ಮಹಾನಗರ ಪಾಲಿಕೆ ಸಿಬ್ಬಂದಿ ಖುದ್ದಾಗಿ ಪರಿಶೀಲನೆ ನಡೆಸಿ ಮತ್ತು ನಗರದಲ್ಲಿ ನಿರ್ಮಿಸಿರುವ ಸಾರ್ವಜನಿಕರ ಶೌಚಾಲಯಗಳನ್ನು ಪಟ್ಟಿ ಮಾಡಿ ಅದರ ನಿರ್ವಹಣೆ ಹಾಗೂ ಗುಣಮಟ್ಟವನ್ನು ಅರಿಯಬೇಕು ಎಂದರು.

ಟ್ರೇಡ್‌ ಲೈಸೆನ್ಸ್‌ ಪಡೆಯಿರಿ:1996ರ ಕಾಯ್ದೆಯ ಪ್ರಕಾರ ನಗರದಲ್ಲಿ ಇರುವ ಅಂಗಡಿ, ಮುಂಗಟ್ಟುಗಳು ಕಡ್ಡಾಯವಾಗಿ ಟ್ರೇಡ್‌ ಲೈಸೆನ್ಸ್‌ ಪಡೆಯಬೇಕು ಎಂಬ ನಿಯಮವಿದೆ. ಬಳ್ಳಾರಿ ನಗರದಲ್ಲಿ 10 ಸಾವಿರಕ್ಕೂ ಅಧಿಕ ವಿವಿಧ ರೀತಿಯ ಅಂಗಡಿಗಳು ಇವೆ. ಇದರಲ್ಲಿ ಅಲ್ಪ ಅಂಗಡಿಗಳು ಮಾತ್ರ ಟ್ರೇಡ್‌ ಲೈಸೆನ್ಸ್‌ ಪಡೆದಿದ್ದು, ಇನ್ನುಳಿದವರಿಗೆ ಟ್ರೇಡ್‌ ಲೈಸೆನ್ಸ್‌ ಪಡೆದುಕೊಳ್ಳವಂತೆ ಜಾಗೃತಿ ಮೂಡಿಸಿದ್ದೇವೆ. ಆದರೂ, ಟ್ರೇಡ್‌ ಲೈಸೆನ್ಸ್‌ ಪಡೆಯದೆ ಹೋದರೆ ಅಂಥ ಅಂಗಡಿಗಳ ಬಾಗಿಲು ಮುಚ್ಚಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಮಹಾನಗರ ಪಾಲಿಕೆಯು ನಗರದ ಸಾರ್ವಜನಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಪಾಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದ್ದಲ್ಲಿ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಭರಿಸಬೇಕು ಮತ್ತು ಇನ್ನು ಮುಂದೆಯೂ ನಿರಂತರವಾಗಿ ಕಟ್ಟುತ್ತಾ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಕೋರಿದರು. ಸಾರ್ವಜನಿಕರು ಇದೇ ಸಂದರ್ಭದಲ್ಲಿ ವಿವಿಧ ರೀತಿಯ ದೂರುಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಎಂಜನಿಯರ್‌ಗಳು ಸೇರಿದಂತೆ ವಿವಿಧ ಶಾಖೆಗಳ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next