Advertisement

ದೇಶಕ್ಕೆ ನರೇಂದ್ರ ಮೋದಿ ಆಡಳಿತವೇ ಸೂಕ್ತ

03:48 PM Apr 21, 2019 | Naveen |

ಬಳ್ಳಾರಿ: ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಅವರು ಶನಿವಾರ ಪ್ರಚಾರ ನಡೆಸಿದರು. ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರೊಂದಿಗೆ ಇಲ್ಲಿನ ಕಾಕರ್ಲತೋಟ ಸೇರಿ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ತೆರಳಿದ ಕಟ್ಟಾಸುಬ್ರಣ್ಯನಾಯ್ಡು ಅಭ್ಯರ್ಥಿ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 1 ತಿಂಗಳಿಂದ ರಾಜ್ಯದ ನಾನಾ ಕಡೆಗಳಲ್ಲಿ ನಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿರುವೆ. ತೆರಳಿದ ಎಲ್ಲ ಕಡೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ಉತ್ತಮ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್‌ ನವರು ಈ ಬಾರಿ ಎಷ್ಟು ಶ್ರಮಿಸಿದರೂ ರಾಜ್ಯದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರು ಸರಳ ಸಜ್ಜನಿಕೆಗೆ ಹೆಸರಾದವರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ 5 ವರ್ಷಗಳ ಅವಧಿಯಲ್ಲಿ ಎಲ್ಲ ವರ್ಗದವರಿಗೆ ಪೂರಕವಾಗುವ ಅನೇಕ ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ದೇಶದ ಅಭಿವೃದ್ಧಿಗೆ ಕೈಗೊಂಡ
ಕಠಿಣ ನಿರ್ಧಾರಗಳಿಂದ ಇಡೀ ವಿಶ್ವವೇ ದೇಶವನ್ನು ಗಮನಿಸುತ್ತಿದೆ. ಇಂತಹ ಸಮರ್ಥ ನಾಯಕ ದೇಶಕ್ಕೆ ಅಗತ್ಯವಿದೆ. ಮೋದಿಜೀ ಅವರು ತೆರಳಿದ ಪ್ರಚಾರ ಸಭೆಯಲ್ಲಿ ಹರಿದು ಬರುತ್ತಿರುವ ಜನಸಾಗರವೇ ಇದಕ್ಕೆ ಸಾಕ್ಷಿ ಎಂದರು.

ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿರುವ ಮೋದಿ ಕೈ ಬಲಪಡಿಸಲು ಪ್ರತಿಯೊಬ್ಬರೂ ಅಭಿವೃದ್ಧಿ ನಿರೀಕ್ಷಿಸಿ ಬಿಜೆಪಿಗೆ ಬೆಂಬಲಿಸಿ, ಅಭ್ಯರ್ಥಿ ದೇವೇಂದ್ರಪ್ಪ ಅವರನ್ನು ಆಶೀರ್ವದಿಸಬೇಕು. ಕೈ ಅಭ್ಯರ್ಥಿ ಉಗ್ರಪ್ಪ ಅವರ ನಾನಾ ಸುಳ್ಳು ಭರವಸೆಗಳಿಗೆ ಮತದಾರರು ಕಿವಿಗೊಡದೆ ಬಿಜೆಪಿ ಅಭ್ಯರ್ಥಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ವೀರಶೇಖರ ರೆಡ್ಡಿ, ಶ್ರೀನಿವಾಸ್‌ ಮೋತ್ಕರ್‌, ಮಲ್ಲನಗೌಡ, ಶಶಿಕಲಾ, ಪ್ರಸಾದರೆಡ್ಡಿ, ನಾಗೇಶ್‌, ಪಾಲನ್ನ, ಲಕ್ಷ್ಮೀ ಅಣ್ಣಪ್ಪ, ಶ್ರೀದೇವಿ ರಮೇಶ್‌, ಸಂದೀಪ್‌ ಸುಬ್ಬರಾವ್‌, ಕೆ.ನಾಗರಾಜ್‌ ರಾವ್‌, ಬುಜ್ಜಯ್ಯ, ಶ್ರೀನಿವಾಸಲು, ರಾಘವೇಂದ್ರ ರೆಡ್ಡಿ, ಹೊನ್ನೂರು ಸ್ವಾಮಿ, ಹನುಮೇಶ್‌ ಸೇರಿದಂತೆ ನೂರಾರು ಕಾರ್ಯಕರ್ತರು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next