Advertisement

ಬಿಜೆಪಿ ಜಯಭೇರಿ; ಸಂಭ್ರಮಾಚರಣೆ

12:30 PM May 24, 2019 | Team Udayavani |

ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆಯ ಬಳ್ಳಾರಿ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರವಾದ ಆರ್‌ವೈಎಂಇಸಿ ಕಾಲೇಜು ಎದುರು ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸಂಭ್ರಮಿಸಿದರು.

Advertisement

ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಕೇಂದ್ರದ ಹೊರಗೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪಕ್ಷದ ಕಾರ್ಯಕರ್ತರು ಬಿಜೆಪಿ ಬಾವುಟಗಳನ್ನು ಬೈಕ್‌ಗಳಲ್ಲಿ ನಗರದಾದ್ಯಂತ ಸಂಚರಿಸಿ ಸಂಭ್ರಮಿಸಿದರು. ತಮ್ಮ ನೆಚ್ಚಿನ ಅಭ್ಯರ್ಥಿ ಗೆಲುವಿಗಾಗಿ ಅಭಿಮಾನಿಗಳು ಬಿರು ಬಿಸಲನ್ನು ಲೆಕ್ಕಸದೇ, ಒಂದೊಂದು ಬೂತ್‌ನ ಮತ ಎಣಿಕೆಯನ್ನು ಎದುರು ನೋಡುತ್ತಿದ್ದರು. ಅಭ್ಯರ್ಥಿಗೆ ಮುನ್ನಡೆ ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಜೈಕಾರ ಸಂತಸ ವ್ಯಕ್ತಪಡಿಸಿದರು.

ಮತ ಎಣಿಕೆ ನಡೆಯುತ್ತಿದ್ದ ಕೇಂದ್ರದ ಸಮೀಪ ಬೆಳಗ್ಗೆಯಿಂದಲೇ ನಗರ ಕಾರ್ಯಕರ್ತರು ಸೇರಿ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಂಡೂರು, ಕೂಡ್ಲಿಗಿ, ಕಂಪ್ಲಿ ತಾಲೂಕುಗಳಿಂದ ಅಗಮಿಸಿದ್ದ ಬಿಜೆಪಿ, ಕಾಂಗ್ರೆಸ್‌- ಜೆಡಿಎಸ್‌ ಹಾಗೂ ಇತರೆ ಪಕ್ಷಗಳ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ ಎಣಿಕೆ ಆರಂಭಗೊಂಡು ಬಹಳ ಹೊತ್ತಾದ್ದರೂ ಸ್ಥಳಕ್ಕೆ ಆಗಮಿಸಿರಲಿಲ್ಲ. ಸುಮಾರು 11 ಗಂಟೆಗೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವೈ.ದೇವೇಂದ್ರಪ್ಪ ಮುನ್ನಡೆ ಸಾಧಿಸುತ್ತಿದ್ದಂತೆ ಎಣಿಕೆ ಕೇಂದ್ರದತ್ತ ಧಾವಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಪ್ರಧಾನಿ ನರೇಂದ್ರ ಮೋದಿ, ಚುನಾಯಿತ ಅಭ್ಯರ್ಥಿ ದೇವೇಂದ್ರಪ್ಪ ಹಾಗೂ ಶ್ರೀರಾಮಲು ಪರ ಜೈಕಾರ ಕೂಗಿದರು.

ಫಲಿತಾಂಶ ಪ್ರಕಟವಾದ ಬಳಿಕೆ ಎಣಿಕೆ ಕೇಂದ್ರದಿಂದ ಹೊರಬಂದು ಚುನಾಯಿತ ಅಭ್ಯರ್ಥಿ ವೈ.ದೇವೇಂದ್ರಪ್ಪ, ಶಾಸಕ ಶ್ರೀರಾಮುಲು, ಕಾರ್ಯಕರ್ತರತ್ತ ಕೈ ಬೀಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನು ಸುತ್ತುವರಿದು ಹಾರಗಳನ್ನು ಹಾಕಿ ಸಂಭ್ರಮಿಸಿದರು.

ಕ್ಷೇತ್ರದಲ್ಲಿ ಗೆಲುವಿನ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ವೈ.ದೇವೆಂದ್ರಪ್ಪ ಗೆಲುವನ್ನು ಎದುರು ಕಾಯುತ್ತಿದ್ದ ಅವರ ಅಭಿಮಾನಿಗಳು ಜೈಕಾರ ಕೂಗಿ ಸಂತಸಗೊಂಡರೆ, ಮತ್ತೆ ಕೆಲವರು ಬೋಲೋ ಭಾರತ್‌ ಮಾತಾಕಿ ಜೈ, ರಾಮ್‌, ಶ್ರೀರಾಮ್‌, ಜೈ ಮೋದಿ ಎಂದು ಹೇಳುತ್ತಾ ವಾಹನಗಳಲ್ಲಿ ತೆರಳಿದರು.

Advertisement

ಎಲ್ಲಾ ಕಡೆಗಳಲ್ಲಿ ರಸ್ತೆ ಬಂದ್‌: ನಗರದ ರಾವ್‌ ಬಹದ್ದೂರ್‌ ವೈ ಮಹಾಬಳೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಗುರುವಾರ ಮತ ಎಣಿಕೆ ನಡೆಯುತ್ತಿದ್ದ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಕಾಲೇಜಿನ ಎಲ್ಲಾ ಕಡೆಯ ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next