Advertisement

ಮಲ್ಲಿಗೆನಾಡಲ್ಲಿ ಮತದಾರರ ಮನ್ನಣೆ ಯಾರಿಗೆ?

01:02 PM May 02, 2019 | Naveen |

ಬಳ್ಳಾರಿ: ಜಿಲ್ಲೆಯ ಮಲ್ಲಿಗೆನಾಡು ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ನಂತರ ಸೋಲುಗೆಲುವಿನ ಲೆಕ್ಕಾಚಾರ ಜೋರಾಗಿದೆ.

Advertisement

ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ 31 ಸಾವಿರಕ್ಕೂ ಹೆಚ್ಚು ಲೀಡ್‌ ನೀಡಿದ್ದ ಮತದಾರರು, ಈ ಚುನಾವಣೆಯಲ್ಲೂ ‘ಕೈ’ ಹಿಡಿಯಲಿದ್ದಾರೆ ಎಂಬುದು ಕಾಂಗ್ರೆಸ್‌ ನಿರೀಕ್ಷೆ. ಪ್ರಧಾನಿ ನರೇಂದ್ರ ಮೋದಿಯವರ ಅಲೆ, ಯುವ ಮತದಾರರು ಕಮಲಕ್ಕೆ ಸಾಥ್‌ ನೀಡಲಿದ್ದಾರೆ ಎಂಬುದು ಬಿಜೆಪಿಯವರ ವಿಶ್ವಾಸ. ಹೀಗೆ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

ವಿಭಿನ್ನ ಕ್ಷೇತ್ರ: ಬಳ್ಳಾರಿ ಮೀಸಲು ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳು ಒಂದು ರೀತಿಯದ್ದಾದರೆ, ಮಲ್ಲಿಗೆನಾಡು ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ಮಾತ್ರ ಸ್ವಲ್ವ ಭಿನ್ನ. ಜಿಲ್ಲೆಯಲ್ಲೇ ಪ್ರಬುದ್ಧ ಮತದಾರರುಳ್ಳ ಕ್ಷೇತ್ರವೆಂದು ಕರೆಯಲಾಗುವ ಇಲ್ಲಿ ಸತತವಾಗಿ ಎರಡು ಬಾರಿ ಗೆದ್ದ ಅಭ್ಯರ್ಥಿಗಳೇ ಇರಲಿಲ್ಲ. ರಾಜ್ಯ ರಾಜಕಾರಣದಲ್ಲಿ ಮುತ್ಸದ್ದಿ ಎಂದೇ ಗುರುತಿಸಿಕೊಂಡ ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ. ಪ್ರಕಾಶ್‌ ಅವರನ್ನು ಸಹ ಒಮ್ಮೆ ಗೆಲ್ಲಿಸಿದ ಬಳಿಕ ನಂತರ ಸೋಲಿಸಿದ ಕ್ಷೇತ್ರ ಇದು. ದಶಕಗಳಿಂದ ನಡೆದುಕೊಂಡು ಬಂದಿದ್ದ ಈ ಸಂಪ್ರದಾಯಕ್ಕೆ ಹಾಲಿ ಶಾಸಕ ಪಿ.ಟಿ.ಪರಮೇಶ್ವರ್‌ನಾಯ್ಕ 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಸತತ ಗೆಲ್ಲುವ ಮೂಲಕ ಬ್ರೇಕ್‌ ಹಾಕಿದರು.

ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಒಲವು ಹೆಚ್ಚಿದೆ. ಈಚೆಗೆ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಿಜೆಪಿಗಿಂತ 31419 ಮತಗಳ ಲೀಡ್‌ ಲಭಿಸಿದೆ. ಈಗ ಸಾರ್ವತ್ರಿಕ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ‘ಕೈ’ ಅಭ್ಯರ್ಥಿಗೆ ಮುನ್ನಡೆ ಲಭಿಸಲಿದೆ. ಅಲ್ಲದೇ, ಕೈ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ವಿದ್ಯಾವಂತರು ಎಂಬುದನ್ನೂ ಕ್ಷೇತ್ರದ ಮತದಾರರು ಪರಿಗಣಿಸಿದ್ದಾರೆ ಎನ್ನಲಾಗುತ್ತಿದ್ದು, ಕಾಂಗ್ರೆಸ್‌ಗೆ ಇವೆಲ್ಲ ಪ್ಲಸ್‌ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನೊಂದೆಡೆ ಕ್ಷೇತ್ರದಲ್ಲಿ ಮೋದಿ ಅಲೆಯೂ ಜೋರಾಗಿದ್ದು, ಇದು ಬಿಜೆಪಿಗೆ ವರವಾಗಲಿದೆ. ಜತೆಗೆ ಕ್ಷೇತ್ರಾದ್ಯಂತ ಕೈಗೊಂಡ ಪ್ರಚಾರ, ಯುವ ಮತದಾರರು ಸಹ ಸಾಥ್‌ ನೀಡಿರುವುದು ಇವೆಲ್ಲ ಬಿಜೆಪಿಗೆ ಪ್ಲಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Advertisement

ಶೇ.71.45 ರಷ್ಟು ಮತದಾನ: ಹಡಗಲಿ ಕ್ಷೇತ್ರದಲ್ಲಿ ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ.75.89ರಷ್ಟು ಮತದಾನವಾಗಿತ್ತು. ಆಗ ಕೈ ಅಭ್ಯರ್ಥಿಯಾಗಿದ್ದ ಸಚಿವ ಪಿ.ಟಿ.ಪರಮೇಶ್ವರನಾಯ್ಕಗೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಓದೊ ಗಂಗಪ್ಪ ತೀವ್ರ ಪೈಪೋಟಿ ನೀಡಿದ್ದರು. ಆದರೆ, ಪರಮೇಶ್ವರ್‌ನಾಯ್ಕರ ರಾಜಕೀಯ ತಂತ್ರಗಾರಿಕೆಯಿಂದಾಗಿ 9 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು. ಆಗ ಕ್ಷೇತ್ರದ ಪ್ರಬಲ ಸಮುದಾಯಗಳು ಕಾಂಗ್ರೆಸ್‌ ವಿರುದ್ಧ ಹಕ್ಕು ಚಲಾಯಿಸಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದವು. ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಶೇ.61.90ರಷ್ಟು ಮತದಾನವಾಗಿದ್ದರೂ ಕಾಂಗ್ರೆಸ್‌ ಪಕ್ಷಕ್ಕೆ 31,419 ಮತಗಳ ಲೀಡ್‌ ಸಿಕ್ಕಿತ್ತು. ಆದರೆ, ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ 93,678 ಪುರುಷ, 91,589 ಮಹಿಳೆ, 12 ಇತರೆ ಸೇರಿದಂತೆ ಒಟ್ಟು 1,86,279 ಮತದಾರರ ಪೈಕಿ 68,699 ಪುರುಷ, 63,687 ಮಹಿಳೆ ಸೇರಿ ಒಟ್ಟು 1,32386 ಮತದಾರರು ಹಕ್ಕು ಚಲಾಯಿಸಿದ್ದು, ಶೇ.71.45ರಷ್ಟು ಮತದಾನವಾಗಿದೆ. ಆದರೆ, ಮತದಾರರು ಯಾರಿಗೆ ಮುನ್ನಡೆ ನೀಡಿದ್ದಾರೆ? ಎಂಬುದು ಸದ್ಯದ ಕುತೂಹಲವಾಗಿದೆ.

ಜಾತಿ ಲೆಕ್ಕಾಚಾರ: ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ಕುರುಬ, ಮುಸ್ಲಿಂ, ವಾಲ್ಮೀಕಿ ಮತಗಳು ಪ್ರಮುಖವಾಗಿವೆ. ಕಳೆದ ವಿಧಾನಸಭೆ, ಲೋಕಸಭೆ ಉಪಚುನಾವಣೆಯಂತೆ ಈ ಬಾರಿಯೂ ವೀರಶೈವ ಲಿಂಗಾಯತ, ವಾಲ್ಮೀಕಿ ಇತರೆ ಮೇಲ್ವರ್ಗದ ಮತಗಳು ಬಿಜೆಪಿ ಪಾಲಾಗಿರುವ ಸಾಧ್ಯತೆಯಿದೆ. ಇನ್ನು ಕುರುಬ, ಮುಸ್ಲಿಂ, ದಲಿತ ಮತಗಳು ಕಾಂಗ್ರೆಸ್‌ ಪಾಲಾಗಿವೆ. ವಾಲ್ಮೀಕಿ ಸಮುದಾಯದ ಮತಗಳು ಎರಡೂ ಪಕ್ಷಗಳಿಗೆ ಚದುರಿರುವ ಸಾಧ್ಯತೆಯಿದೆ ಎಂದು ಜಾತಿವಾರು ಮತಗಳ ಲೆಕ್ಕಾಚಾರ ಮಾಡಲಾಗುತ್ತಿದೆ.

ಆದರೂ, ಕ್ಷೇತ್ರದಲ್ಲಿ ಯಾರಿಗೂ ನಿರೀಕ್ಷಿತ ಮುನ್ನಡೆ ದೊರೆಯುವುದು ಕಷ್ಟವಾಗಿದ್ದು, ಸ್ವಲ್ಪ ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ, ಲೋಕಸಭೆ ಉಪಚುನಾವಣೆಯಲ್ಲಿ ಇದ್ದಂತೆ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್‌ ಪರವಾದ ವಾತಾವರಣವಿದೆ. ಐದು ವರ್ಷ ಆಡಳಿತ ನಡೆಸಿದ ಕೇಂದ್ರ ಸರ್ಕಾರ ಜನಪರವಾದ ಯಾವುದೇ ಒಂದು ಯೋಜನೆ ಜಾರಿ ಮಾಡಿಲ್ಲ. ಕೇಂದ್ರ ಸರ್ಕಾರ ಬಡವರ ಪರ ಇಲ್ಲ. ಹೀಗಾಗಿ ಕ್ಷೇತ್ರದಲ್ಲಿ ಸುಮಾರು 25-30 ಸಾವಿರಕ್ಕೂ ಹೆಚ್ಚು ಮತಗಳ ಲೀಡ್‌ ದೊರೆಯುವುದು ಖಚಿತ.
ಎಂ. ಪರಮೇಶ್ವರಪ್ಪ, ಅಧ್ಯಕ್ಷರು, ಹಡಗಲಿ ಬ್ಲಾಕ್‌ ಕಾಂಗ್ರೆಸ್‌.

ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 8 ರಿಂದ 10 ಸಾವಿರ ಮತಗಳು ಲೀಡ್‌ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಲೆ ಕ್ಷೇತ್ರದಲ್ಲಿದ್ದು, ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರಿಗೆ ಸಾಥ್‌ ನೀಡಲಿದೆ. ಯುವ ಮತದಾರರು ಬಿಜೆಪಿ ಪರವಾಗಿದ್ದು, ಬಿಜೆಪಿ ಅಭ್ಯರ್ಥಿ ಪರ ಮತಗಳ ಲೀಡ್‌ ಹೆಚ್ಚಿಸಲಿದೆ.
ಎಂ.ಬಿ. ಬಸಣ್ಣ, ಅಧ್ಯಕ್ಷರು, ಬಿಜೆಪಿ ತಾಲೂಕು ಘಟಕ, ಹಡಗಲಿ.

ರಾಜ್ಯದಲ್ಲಿ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಇದರ ಫಲವಾಗಿ ಮೈತ್ರಿ ಪಕ್ಷದ ಅಭ್ಯರ್ಥಿ ಉಗ್ರಪ್ಪ ಅವರಿಗೆ ಕ್ಷೇತ್ರದಲ್ಲಿ ಹೆಚ್ಚು ಮತಗಳು ಲಭಿಸುವ ಸಾಧ್ಯತೆಯಿದ್ದು, ಗೆಲುವು ಖಚಿತ. •ಪುತ್ರೇಶ್‌, ಜೆಡಿಎಸ್‌ ಮುಖಂಡ, ಹಡಗಲಿ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next