Advertisement
ಉಪಚುನಾವಣೆಯಲ್ಲಿ ಕೈ ಗೆ ಲೀಡ್: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಮೂರು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸದ್ಯ ಬಿಜೆಪಿಯ ಎನ್.ವೈ. ಗೋಪಾಲಕೃಷ್ಣ ಹಾಲಿ ಶಾಸಕರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಎರಡನೇ ಸ್ಥಾನಗಳಿಸಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಸಹ ಬಲವಾಗಿಯೇ ಇದೆ. ಆಗ ನಾಲ್ಕನೇ ಸ್ಥಾನಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿಗಿಂತಲೂ ಕಡಿಮೆ ಮತ ಪಡೆದಿದ್ದೂ ಸಹ ವಿಶೇಷವಾಗಿತ್ತು. ಆದರೆ, ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ 22029 ಮತಗಳು ಲೀಡ್ ಸಿಕ್ಕಿದ್ದವು.
Related Articles
Advertisement
ಅಲ್ಲದೇ, ಕಳೆದ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಸಚಿವ, ಶಾಸಕರ ದಂಡು ಕ್ಷೇತ್ರದಲ್ಲಿ ಬೀಡುಬಿಟ್ಟಿತ್ತು. ಜತೆಗೆ ಮೈತ್ರಿ ಪಕ್ಷದವರು ಮತದ ಮೌಲ್ಯವನ್ನು ವೃದ್ಧಿಸಿದ್ದರು. ಇದು ಮೈತ್ರಿ ಅಭ್ಯರ್ಥಿಗೆ ಲೀಡ್ ದೊರೆಯಲು ನೆರವಾಗಿತ್ತು. ಆಗ ಬಿಜೆಪಿಯವರು ಸಹ ಕೇವಲ ಐದು ತಿಂಗಳ ಅವಧಿ ಎಂದು ನಿರ್ಲಕ್ಷ್ಯ ತಾಳಿ ಮತದಾರರ ಮತಗಳಿಗೆ ಮೌಲ್ಯವನ್ನೇ ವೃದ್ಧಿಸಿರಲಿಲ್ಲ. ಇದು ಆಗ ಬಿಜೆಪಿಯವರಿಗೆ ಮೈನಸ್ ಆಗಲು ಕಾರಣವಾಗಿತ್ತು. ಇದೀಗ ಸಾರ್ವತ್ರಿಕ ಚುನಾವಣೆಯಲ್ಲಿ ಕಮಲ ಮೇಲುಗೈ ಎನ್ನಲಾಗುತ್ತಿದೆ.
ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ವಾಲ್ಮೀಕಿ, ಲಿಂಗಾಯತ, ಕುರುಬ, ದಲಿತ, ಮುಸ್ಲಿಂ ಮತಗಳು ಪ್ರಮುಖ ಪಾತ್ರ ವಹಿಸಲಿವೆ. ಕ್ಷೇತ್ರದಲ್ಲಿ ದೊಡ್ಡ ಸಮುದಾಯವಾದ ವಾಲ್ಮೀಕಿ, ಲಿಂಗಾಯತ ಮತಗಳು ಬಿಜೆಪಿಯನ್ನು ಬೆಂಬಲಿಸಬಹುದಾಗಿದೆ. ದಲಿತ, ಕುರುಬ, ಮುಸ್ಲಿಂ ಮತಗಳು ಕಾಂಗ್ರೆಸ್ ಬೆನ್ನಿಗೆ ನಿಲ್ಲಲಿವೆ. ಮೇಲಾಗಿ ಈ ಬಾರಿ ಕ್ಷೇತ್ರದ ದಲಿತ ಮತಗಳು ಬಿಎಸ್‌ಪಿ ಪಕ್ಷಕ್ಕೂ ಹಂಚಿ ಹೋಗಿವೆ ಎನ್ನಲಾಗುತ್ತಿದ್ದು, ಯಾವ ಅಭ್ಯರ್ಥಿಗೆ ಎಷ್ಟು ಮತಗಳು ಲಭಿಸಿವೆ ಎಂಬುದು ಫಲಿತಾಂಶದಿಂದಷ್ಟೇ ಸ್ಪಷ್ಟವಾಗಲಿದೆ.
ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಸಚಿವರು, ಶಾಸಕರ ದಂಡೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಹಿನ್ನೆಲೆಯಲ್ಲಿ 22 ಸಾವಿರ ಮತಗಳ ಲೀಡ್ ಲಭಿಸಿತ್ತು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಅಷ್ಟು ನಿರೀಕ್ಷೆಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಕ್ಷೇತ್ರದಲ್ಲಿ ಹೆಚ್ಚು ಸಂಚರಿಸಿಲ್ಲ. ಇದು ಕ್ಷೇತ್ರದಲ್ಲಿ ನಿರೀಕ್ಷಿತ ಮತಗಳು ಲಭಿಸುವಲ್ಲಿ ತೊಡಕಾಗಲಿದ್ದು, ಅಲ್ಪ ಸ್ವಲ್ಪ ಲೀಡ್ ದೊರೆಯುವ ಸಾಧ್ಯತೆಯಿದೆ.•ಕೋಗಳಿ ಮಂಜುನಾಥ್,
ಮಾಜಿ ಅಧ್ಯಕ್ಷರು, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್. ಬಳ್ಳಾರಿ ಲೋಕಸಭೆ ಚುನಾವಣೆಯ ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ 8-10 ಸಾವಿರ ಮತಗಳ ಲೀಡ್ ದೊರೆಯುವ ಸಾಧ್ಯತೆಯಿದೆ. ಬೇರೆ ಜಿಲ್ಲೆ, ರಾಜ್ಯ, ದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಕ್ಷೇತ್ರದ ಮತದಾರರು ಮೋದಿಯವರ ಕೈ ಬಲಪಡಿಸಲೆಂದೇ ಕ್ಷೇತ್ರಕ್ಕೆ ಬಂದು ಹಕ್ಕು ಚಲಾಯಿಸಿದ್ದಾರೆ. ಜತೆಗೆ ಕ್ಷೇತ್ರದಲ್ಲಿ 2 ಸಾವಿರ ಯುವಕರು ಸ್ವಯಂ ಪ್ರೇರಣೆಯಿಂದ ಪ್ರಧಾನಿ ಮೋದಿ ಅವರ ಪರವಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಸೇರಿ ಹಲವು ಯೋಜನೆಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಲಭಿಸುವ ವಿಶ್ವಾಸವಿದೆ.
•ಸಚಿನ್‌ಕುಮಾರ್,
ಬಿಜೆಪಿ ಯುವ ಮುಖಂಡರು, ಕೂಡ್ಲಿಗಿ ವೆಂಕೋಬಿ ಸಂಗನಕಲ್ಲು