Advertisement

ಕೋಮುವಾದಿ ಬಿಜೆಪಿ ತಿರಸ್ಕರಿಸಿ

01:21 PM Apr 22, 2019 | Team Udayavani |

ಬಳ್ಳಾರಿ: ಕಳೆದ ಐದು ವರ್ಷದಲ್ಲಿ ಮೋದಿಯವರು ಪ್ರಜಾತಂತ್ರ ವ್ಯವಸ್ಥೆಯನ್ನು ಗಾಳಿಗೆ ತೂರಿ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ಪ್ರಜಾತಂತ್ರ ವ್ಯವಸ್ಥೆ ಉಳಿಸಲು ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪರನ್ನು ಬೆಂಬಲಿಸುವ ಮೂಲಕ ಸಂವಿಧಾನ ಉಳಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ದುರುಗಪ್ಪ ತಳವಾರ ಹೇಳಿದರು.

Advertisement

ದಲಿತ ಸಂಘಟನೆಗಳ ಒಕ್ಕೂಟದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಲಾಗಿತ್ತು. ಆದರೆ, ಡಾ| ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿದರೂ, ಪ್ರಧಾನಿ ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ. ದೇಶದಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಮೂರ್ತಿಗಳನ್ನು ಕಾಣಬಾರದು ಎಂದು ಹೇಳಿಕೆಯನ್ನು ನೀಡಿದ ಆರ್‌ಎಸ್‌ಎಸ್‌ನ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ. ಅಷ್ಟೆ ಅಲ್ಲದೇ ಕೇಂದ್ರದ ಸ್ವಾಯತ್ತ ಸಂಸ್ಥೆಗಳ ಮೇಲೆ ಮೋದಿಯವರ ಪ್ರಭಾವ ಬೀರುತ್ತಿದ್ದಾರೆ. ದೇಶದಲ್ಲಿ ಅಭದ್ರತೆ ಕಾಡುತ್ತಿದೆ. ನಿರಂತರವಾಗಿ ದಲಿತರ ಹಾಗೂ ಅಲ್ಪಸಂಖ್ಯತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಹಿಂದೆಗಿಂತಲೂ ಈಗ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆದರೂ ಮೋದಿ ಮೋದಿ ಎಂದು ಕೆಲ ಯುವಕರು ಘೋಷಣೆ ಕೂಗುತ್ತಿದ್ದಾರೆ. ಅವರಿಗೆ ಈ ದೇಶದ ಇತಿಹಾಸ ಗೊತ್ತಿಲ್ಲದಂತಾಗಿದೆ. ಆದ್ದರಿಂದ ದೇಶದ ಭವಿಷ್ಯಕ್ಕಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ನನ್ನು ಬೆಂಬಲಿಸಿ ವಿ.ಎಸ್‌.ಉಗ್ರಪ್ಪಗೆ ಗೆಲ್ಲಿಸಬೇಕಿದೆ ಎಂದರು.

ಸಮಿತಿ ಮುಖಂಡ ವೆಂಕಟೇಶ್‌ ಮೂರ್ತಿ ಮಾತನಾಡಿದರು. ಒಕ್ಕೂಟದ ಮುಖಂಡರಾದ ಹುಸೇನಪ್ಪ, ಈರಪ್ಪ, ವೆಂಕಟೇಶ್‌ಮೂರ್ತಿ, ಗಂಗಾಧರ್‌, ಗಾದಿಲಿಂಗಪ್ಪ, ತಿಪ್ಪೇಸ್ವಾಮಿ ಗುಂಡಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next