Advertisement

ಬದಲಾಯ್ತು ಬಳ್ಳಾರಿ ಮತ ಸಮರದ ಖದರ್‌

11:59 AM Apr 22, 2019 | Naveen |

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಎಂದಾಕ್ಷಣ ಇಲ್ಲಿನ ಚುನಾವಣಾ ಖದರ್ರೇ ಬೇರೆ ರೀತಿ ಇರಲಿದೆ. ರಾಜ್ಯ, ರಾಷ್ಟ್ರಮಟ್ಟದ ವಿಷಯಾಧಾರಿತವಾಗಿ ಒಮ್ಮೆಯೂ ಚುನಾವಣೆ ನಡೆಯದ ಜಿಲ್ಲೆಯಲ್ಲಿ ರಾಜಕೀಯ ಮುಖಂಡರ ಮಾತಿನ ಅಬ್ಬರ, ಕಾರ್ಯಕರ್ತರ ಆರ್ಭಟ, ಜಿಲ್ಲೆಯಲ್ಲೇ ಬೀಡುಬಿಡುತ್ತಿದ್ದ ರಾಜ್ಯ, ರಾಷ್ಟ್ರಮಟ್ಟ ನಾಯಕರ ದಂಡು, ಆರೋಪ-ಪ್ರತ್ಯಾರೋಪ ಇವೆಲ್ಲ ಇರಲಿವೆ ಹೀಗೆಲ್ಲ ಅಂದುಕೊಳ್ಳೋದು ಸಹಜ. ಹಿಂದೆಲ್ಲ ನಡೆದ ಚುನಾವಣೆಗಳಲ್ಲಿ ಹೀಗೆ ನಡೆದಿದ್ದೂ ಸತ್ಯ. ಆದರೆ, ಪ್ರಸಕ್ತ ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಚಾರ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ.

Advertisement

ಹೌದು…..! ಅಚ್ಚರಿ ಎನಿಸಿದರೂ ಇದು ಸತ್ಯ. 1999ರಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯಾಧಾರಿತವಾಗಿ ಚುನಾವಣೆ ನಡೆಯಿತು. ಆಗ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಅಂದಿನ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ, ಬಿಜೆಪಿಯ ಸುಷ್ಮಾ ಸ್ವರಾಜ್‌ ಸ್ಪರ್ಧಿಸಿ ರಾಷ್ಟ್ರಮಟ್ಟದ ಗಮನ ಸೆಳೆದಿದ್ದರು. ಆದರೆ, ದೇಶಾದ್ಯಂತ ಬಿಜೆಪಿ ಬೆಂಬಲಿತ ಎನ್‌ಡಿಎ ಬಹುಮತ ಸಾಧಿಸಿದರೆ, ಬಳ್ಳಾರಿಯಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಸೋನಿಯಾಗಾಂಧಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು.

ಇದಕ್ಕೂ ಮುನ್ನ ಮಾಜಿ ಪ್ರಧಾನಮಂತ್ರಿ ದಿ| ಇಂದಿರಾಗಾಂಧಿಯವರು 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದರು. ಕಾಂಗ್ರೆಸ್‌ ಪಕ್ಷಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿತ್ತು. ಆ ಹಿನ್ನೆಲೆಯಲ್ಲಿ 1979ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ಸೇತರ ಅಭ್ಯರ್ಥಿಗಳು ಜಯ ಗಳಿಸಿದರೆ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಕೆ.ಎಸ್‌. ವೀರಭದ್ರಪ್ಪ 1.41 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದರು. ಆಗಲೂ ತುರ್ತು ಪರಿಸ್ಥಿತಿ ಬಳ್ಳಾರಿ ಚುನಾವಣೆ ಮೇಲೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಬಳಿಕ 2004, 2009, 2014ರಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಗಳಲ್ಲಿ ಸ್ಥಳೀಯ ಪ್ರತಿಷ್ಠೆಯೇ ಪ್ರಮುಖ ವಿಷಯವಾಗಿತ್ತು ಹೊರತು, ರಾಜ್ಯ, ರಾಷ್ಟ್ರ ಮಟ್ಟದ ವಿಷಯಗಳು ಜಿಲ್ಲೆಯ ಮಟ್ಟಿಗೆ ಗೌಣವಾದವು ಎನ್ನುತ್ತಾರೆ ಜಿಲ್ಲೆಯ ಹಿರಿಯ ಮುತ್ಸದ್ದಿಗಳು.

ಸದ್ದು ಮಾಡದ ವೆೈಯಕ್ತಿಕ ಟೀಕೆ: ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಕೇಳಿಬಂದ 371(ಜೆ) ಗೊತ್ತಿಲ್ಲ. 420 ಬಗ್ಗೆ ಗೊತ್ತು. ಲಕ್ಷ-ಪಕ್ಷ ಎನ್ನಲು ಬರುವುದಿಲ್ಲ. ಕನಕಪುರ ಗೌಡರು ವಾಲ್ಮೀಕಿ ಸಮುದಾಯನ್ನು ತುಳಿಯಲು ಬಂದಿದ್ದಾರೆ ಎಂಬ ನೇರಾನೇರ ಆರೋಪ-ಪ್ರತ್ಯಾರೋಪಗಳು ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿಬಂದಿಲ್ಲ. ಈ ಹಿಂದೆ ಜಿಲ್ಲೆಯ ಸಂಸದರಾಗಿದ್ದವರು ಎಷ್ಟು ಬಾರಿ ಸಂಸತ್‌ನಲ್ಲಿ ಮಾತನಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಏನು? ಎಂದು ಕಾಂಗ್ರೆಸ್‌ ಅಭ್ಯರ್ಥಿ ಆರೋಪಿಸಿದರೆ, ಹಾಲಿ ಸಂಸದರು ಉಪಚುನಾವಣೆಯಲ್ಲಿ ಬಂದು ಗೆದ್ದು ಹೋದವರು ತಿರುಗಿ ನೋಡಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಆರೋಪವಾಗಿದೆ.

ಈಡೇರಲಿವೆಯಾ ಭರವಸೆ: ವಿಷಯಾಧಾರಿತವಾಗಿ ಚುನಾವಣೆ ನಡೆಯದ ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಅಭ್ಯರ್ಥಿಗಳು ನೀಡುವ ಭರವಸೆಗಳನ್ನೂ ಈಡೇರಿಸಿಲ್ಲ. ಚುನಾವಣೆ ಬಳಿಕ ಜನಪ್ರತಿನಿಧಿಗಳನ್ನು ಈ ಕುರಿತು ಪ್ರಶ್ನಿಸಲು ಜಿಲ್ಲೆಯ ಜನರು ಸಹ ಮುಂದಾಗುವುದಿಲ್ಲ. ಹಾಗಾಗಿ ಚುನಾವಣೆಯಲ್ಲಿ ನೀಡುವ ಭರವಸೆಗಳು ಅಲ್ಲಿಗೆ ಮಾತ್ರ ಸೀಮಿತವಾಗುತ್ತಿವೆ. ಆದರೆ, ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಒಂದಷ್ಟು ಅಭಿವೃದ್ಧಿ ವಿಷಯಗಳೂ ಚರ್ಚೆಯಾಗಿವೆ. ಈ ಹಿಂದೆ ಚುನಾವಣೆಯಲ್ಲಿ ಎಂದೂ ಪ್ರಸ್ತಾಪವಾಗದ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ತೆರವು ಬಗ್ಗೆ ಮೈತ್ರಿಪಕ್ಷಗಳ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಪ್ರಸ್ತಾಪಿಸಿದ್ದಾರೆ. ಜತೆಗೆ ಜಿಲ್ಲೆಯನ್ನು ಕಾಡುತ್ತಿರುವ ಕುಡಿವ ನೀರಿನ ಸಮಸ್ಯೆ ಇತ್ಯರ್ಥ, ರೆೈತರಿಗೆ ಎರಡನೇ ಬೆಳೆಗೆ ನೀರು ಒದಗಿಸುವುದು, ನಿರುದ್ಯೋಗ ಸಮಸ್ಯೆ ನೀಗಿಸುವ ಕುರಿತು ಪ್ರಚಾರದಲ್ಲಿ ಭರವಸೆ ನೀಡಿದ್ದಾರೆ.

Advertisement

ಚುನಾವಣೆ ನಂತರ ಗೆದ್ದವರು ಎಷ್ಟರ ಮಟ್ಟಿಗೆ ಜನರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂಬುದು ಜಿಲ್ಲೆಯ ಜನರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದ್ದು, ಕಾದು ನೋಡಬೇಕಿದೆ.

ಆಗಮಿಸದ ರಾಜ್ಯ-ರಾಷ್ಟ್ರ ನಾಯಕರು
ಜಿಲ್ಲೆಯಲ್ಲಿ ಈ ಹಿಂದೆ ನಡೆದ ಚುನಾವಣೆಗೆ ಹೋಲಿಸಿದರೆ ಪ್ರಸಕ್ತ ಚುನಾವಣೆಯಲ್ಲಿ ಯಾವುದೇ ಅಬ್ಬರ ಕಂಡುಬಂದಿಲ್ಲ. ಜತೆಗೆ ಕಾಂಗ್ರೆಸ್‌ ಪಕ್ಷದಿಂದ ರಾಜ್ಯಮುಖಂಡ ಮಾಜಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಹೊರತುಪಡಿಸಿದರೆ, ಸ್ಥಳೀಯ ಮುಖಂಡರೇ ಪ್ರಚಾರ ನಡೆಸಿದರು. ಇನ್ನು ಬಿಜೆಪಿ ಪಕ್ಷದಲ್ಲೂ ಇದೇ ಪರಿಸ್ಥಿತಿ ನಡೆಯಿತು.

ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಗಮಿಸಿದ್ದನ್ನು ಹೊರತುಪಡಿಸಿದರೆ ನಂತರ ಒಮ್ಮೆಯೂ ಇತ್ತ ತಿರುಗಿ ನೋಡಿಲ್ಲ. ಏ.21 ರಂದು ಜಿಲ್ಲೆಗೆ ಆಗಮಿಸಬೇಕಿದ್ದ ಮಾಜಿ ಸಿಎಂ ಸದಾನಂದಗೌಡರ ಪ್ರವಾಸ ರದ್ದಾಗಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಬಳ್ಳಾರಿ ಚುನಾವಣಾ ಉಸ್ತುವಾರಿ ನೀಡಿದ್ದರಿಂದ ಐದಾರು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇವರನ್ನು ಹೊರತುಪಡಿಸಿದರೆ, ಉಭಯ ಪಕ್ಷಗಳಿಂದ ರಾಜ್ಯಮುಖಂಡರ್ಯಾರೂ ಬಂದಿಲ್ಲ. ಇನ್ನು ಉಭಯ ಪಕ್ಷಗಳ ರಾಷ್ಟ್ರಮಟ್ಟದ ನಾಯಕರು ಸಹ ಒಮ್ಮೆಯೂ ಬಂದಿಲ್ಲ. ಬೃಹತ್‌ ಮಟ್ಟದ ಒಂದು ಸಮಾವೇಶವೂ ನಡೆಯದಿರುವುದು ಗಮನಾರ್ಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next