ಬಳ್ಳಾರಿ: ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಶನಿವಾರ ನಡೆದಿದ್ದು, 5316 ಪ್ರಕರಣಗಳನ್ನು ಕೈಗೆತ್ತಿಕೊಂಡು 1085 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಅದಾಲತ್‌ನಲ್ಲಿ ಒಟ್ಟು 7 ಪೀಠಗಳನ್ನು ರಚಿಸಿ ರಾಜಿ ಮಾಡಿಕೊಳ್ಳಬಹುದಾದ ಬ್ಯಾಂಕ್ ಸಾಲ, ವಿದ್ಯುತ್ ಬಿಲ್ ಪಾವತಿ ಪ್ರಕರಣಗಳು, ಕಾರ್ಮಿಕ ವಿವಾದ ಪ್ರಕರಣಗಳು, ವೈವಾಹಿಕ ವಿವಾದ ಸೇರಿದಂತೆ ಇತರೆ ವ್ಯಾಜ್ಯ ಪೂರ್ವ ಮತ್ತು ಚಾಲ್ತಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ 4655 ಪ್ರಕರಣಗಳ ಪೈಕಿ 794 ಪ್ರಕರಣಗಳು ಇತ್ಯರ್ಥಗೊಂಡಿದ್ದು, 7,39,26,767 ರೂ. ಹಣ ಸಂದಾಯವಾಗಿದೆ. 825 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 291 ಇತ್ಯರ್ಥಗೊಂಡು 1,09,01,757 ರೂ. ಸಂದಾಯವಾಗಿದೆ. ಇದರೊಂದಿಗೆ ಒಟ್ಟು 8,48,28,254 ರೂ. ಹಣ ಸಂದಾಯವಾಗಿದೆ.
ಅದಾಲತ್‌ನಲ್ಲಿ ಒಟ್ಟು 5316 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಚೆಕ್ ಬೌನ್ಸ್, ಆಸ್ತಿ ವಿವಾದ, ಮನೆ ಬಾಡಿಗೆ ವಿವಾದಗಳು ಸೇರಿದಂತೆ ರಾಜಿ ಮಾಡಿಕೊಳ್ಳಬಹುದಾದ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್.ಎಸ್. ಮೆಲ್ಲೂರ್ ಹೇಳಿದರು.
ಅದಾಲತ್‌ನಲ್ಲಿ ಪ್ರಕರಣಗಳನ್ನು ಇಬ್ಬರ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ವ್ಯಾಜ್ಯಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಹಳ ಸಮಯ ಹಿಡಿಯುತ್ತವೆ. ಆದರೆ, ಅದಾಲತ್‌ನಲ್ಲಿ ಇಬ್ಬರ ಒಪ್ಪಿಗೆ ಮೇರೆಗೆ ಪ್ರಕರಣವನ್ನು ಇತ್ಯರ್ಥಗೊಳಿಸ ಲಾಗುತ್ತದೆ. ಇದರಿಂದ ಶತೃತ್ವ ಭಾವನೆ ಕಡಿಮೆಯಾಗುತ್ತದೆ. ಪ್ರಕರಣಗಳು ಬೇಗನೆ ಇತ್ಯರ್ಥಗೊಂಡು ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದರು.
ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳನ್ನು ಮತ್ತೆ ಬೇರೆ ಕಡೆ ಪ್ರಶ್ನಿಸುವಂತಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತಿಲ್ಲ. ಲೋಕ ಅದಾಲತ್‌ನಿಂದ ದ್ವೇಷ ಅಸೂಯೆ ಶಮನವಾಗುತ್ತದೆ. ಇದರಿಂದ ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುತ್ತದೆ.
ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಮಯ ಮತ್ತು ಹಣ ಉಳಿತಾಯ ವಾಗಲಿದ್ದು, ಕಡಿಮೆ ಸಮಯದಲ್ಲಿ ಪ್ರಕರಣ ಇತ್ಯರ್ಥವಾಗುತ್ತವೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎನ್. ಸುಜಾತ ಹೇಳಿದರು. ವಿವಿಧ ಪೀಠಗಳಲ್ಲಿ ಖಾಸಿಂ ಚೂರಿಖಾನ್ ಸೇರಿದಂತೆ ವಿವಿಧ ನ್ಯಾಯಾಧೀಶರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಕಾರ್ಯ ಮಾಡಿದರು.