ಬಳ್ಳಾರಿ: ಎಲ್ಎಲ್ಸಿ ಲೈನಿಂಗ್ ಕಾಮಗಾರಿ ವಿರೋಧಿಸಿ ಪ್ರತಿಭಟಿಸಿದ ರೈತ ಮುಖಂಡರಿಗೆ ಗುತ್ತಿಗೆದಾರರೊಬ್ಬರು ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದಾರೆ. ಒಂದು ವೇಳೆ ರೈತರಿಗೆ ಏನೇ ಆದರೂ, ಅದಕ್ಕೆ ರಾಜ್ಯ ಸರ್ಕಾರ, ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ನೇರ ಹೊಣೆಗಾರರಾಗುತ್ತಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜೂನ್ 10 ರಂದು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮತ್ತು ಎಲ್ಎಲ್ಸಿ ಕಾಲುವೆ ಲೈನಿಂಗ್ (ಆಧುನೀಕರಣ) ವಿರೋಧಿಸಿ ಹೊಸಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಲಾಯಿತು. ಆಗ ಸ್ಥಳಕ್ಕೆ ಆಗಮಿಸಿದ್ದ ಸಂಬಂಧಪಟ್ಟ ಮೇಲಧಿಕಾರಿಗಳು ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂದರು.
ಇನ್ನು ಸ್ಥಳಕ್ಕೆ ಆಗಮಿಸಿದ್ದ ಕರ್ನಾಟಕ-ಆಂಧ್ರದ ಅಧಿಕಾರಿಗಳನ್ನು ಎಲ್ಎಲ್ಸಿ ಕಾಲುವೆ ಆಧುನೀಕರಣಕ್ಕೆ ಸಂಬಂಧಿಸಿದಂತೆ ಕಾಲುಗೆ ಡಿಸೈನ್ ಬದಲಾವಣೆ ಸೇರಿ ಕೆಲ ವಿಷಯ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕಾಲುವೆ ಕಾಮಗಾರಿ ಸ್ಥಗಿತಗೊಳಿಸಿ, ಐದು ದಿನಗಳೊಳಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಆದರೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯುವ ಮುನ್ನವೇ ಎಲ್ಎಲ್ಸಿ ಕಾಮಗಾರಿಯನ್ನು ಪುನಃ ಆರಂಭಿಸಲಾಗಿದೆ. ಅಲ್ಲದೇ, ಪೊಲೀಸರೊಬ್ಬರು ಬುಧವಾರ ಕರೆ ಮಾಡಿ, ನೀವು ಮಾಡುತ್ತಿರುವುದು ಸರಿಯಲ್ಲ. ನಮಗೆ ಮೇಲಿಂದ ಒತ್ತಡವಿದೆ ಎಂದು ತಿಳಿಸಿದ್ದಾರೆ. ಜತೆಗೆ ಸಂಘದ ಸಿರುಗುಪ್ಪ ತಾಲೂಕು ಅಧ್ಯಕ್ಷ ದೇವರೆಡ್ಡಿ ಎನ್ನುವವರಿಗೆ ಭೂಪಾಲರೆಡ್ಡಿ ಎನ್ನುವ ಗುತ್ತಿಗೆದಾರರೊಬ್ಬರು 9482110777 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ನಿಮ್ಮದು ಜಾಸ್ತಿಯಾಗಿದೆ ಎಂದು ಬೆದರಿಕೆಯೊಡ್ಡಿದ್ದಾರೆ. ಹಣ ಬಲ, ತೋಳ್ಬಲದಿಂದ ಸದೃಢರಾಗಿರುವ ಈ ಗುತ್ತಿಗೆದಾರರಿಂದ ರೈತರಿಗೆ ಯಾವುದೇ ತೊಂದರೆಯಾದರಲ್ಲಿ ಅದಕ್ಕೆ ರಾಜ್ಯ ಸರ್ಕಾರ, ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ನೇರ ಹೊಣೆ ಹೊರಲಿದ್ದಾರೆ ಎಂದು ಎಚ್ಚರಿಸಿದರು.
ರೈತರು ಎಂದೂ ಹಿಂಸೆ ಮಾಡಿದವರಲ್ಲ. ಗಾಂಧಿ ತತ್ವ ಅಹಿಂಸಾ ಮಾರ್ಗದಲ್ಲಿ ಪ್ರತಿಭಟನೆ ಮಾಡಿಕೊಂಡೇ ಬಂದಿದ್ದೇವೆ. ಆದರೆ, ರೈತರಿಗೆ ಗುತ್ತಿಗೆದಾರರು ಬೆದರಿಕೆಯೊಡ್ಡುತ್ತಿರುವುದು ರೈತರಲ್ಲಿ ಭಯ, ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಕುರಿತು ಚರ್ಚಿಸಿ, ಎಸ್‌ಪಿ ಬಳಿಗೆ ತೆರಳಿ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಸಂಘದ ಮುಖಂಡರಾದ ಕಾರ್ತಿಕ್ ಬೃಂಗಿಮಠ, ದೇವರೆಡ್ಡಿ, ಪಿ.ನಾರಾಯಣರೆಡ್ಡಿ, ಖಾಸೀಂಸಾಬ್, ವೀರಭದ್ರರೆಡ್ಡಿ, ಬಿ.ವಿ.ಗೌಡ, ವಾಸುರಾಜ್, ಜಡೆಪ್ಪ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.