ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅನನ್ಯ. ಅವಿಸ್ಮರಣೀಯವೂ ಹೌದು. ಆದರೆ, ಭಾರತ-ಪಾಕ್ ನಡುವೆ ನಡೆದ ಕಾರ್ಗಿಲ್ ಯುದ್ಧ ನೆನಪಿಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ.
ಇದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಜಮ್ಮು- ಕಾಶ್ಮೀರದ ಗಡಿಭಾಗದಲ್ಲಿ ಭಾರತೀಯ ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ನಿವೃತ್ತಿ ಪಡೆದ ಮಾಜಿ ಸೈನಿಕ ಚೆನ್ನಾರೆಡ್ಡಿಯವರ ಮಾತು.
ಮೂಲತಃ ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದವರಾದ ಚೆನ್ನಾರೆಡ್ಡಿಯವರು ಸದ್ಯ ಭಾರತೀಯ ಸೇrಟ್ ಬ್ಯಾಂಕಿನ ಪ್ರಧಾನ ಶಾಖೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಪ್ರತಿಯೊಂದು ಘಟನೆಗಳು ನನ್ನ ಕಣ್ ಕಟ್ಟಿವೆ. ಆಗತಾನೆ ಹೊಸದಾಗಿ ಭಾರತೀಯ ಸೇನೆಗೆ ಸೇರಿದ್ದ ನಾನು ಕಾರ್ಗಿಲ್ ಯುದ್ಧದ ಅಖಾಡದಲ್ಲಿ ಧುಮುಕಿರುವುದು ಒಂದ್ ರೀತಿಯ ಹೆಮ್ಮೆಯೂ ಅನಿಸುತ್ತದೆ. ವೀರಮರಣವನ್ನಪ್ಪಿದ ಹುತಾತ್ಮ ಯೋಧರನ್ನು ನೆನೆದರೆ ಈಗಲೂ ನನ್ನ ಮನದೊಳಗೆ ಕೋಪವೂ ಇದೆ. ಸೈನ್ಯಕ್ಕೆ ಸೇರಿ ಮೂರು ವರ್ಷ ಸೇವೆ ಸಲ್ಲಿಸಿದ ಬಳಿಕ ಕಾರ್ಗಿಲ್ ಯುದ್ಧ ಎದುರಾಯಿತು. ಯುದ್ಧ ನಡೆಯುತ್ತಿದ್ದಾಗ ಮನೆ, ಕುಟುಂಬ ಎಂಬ ಯೋಚನೆಗಳೇ ಬರಲ್ಲ. ಯುದ್ಧದಲ್ಲಿ ನಮ್ಮ ಗುರಿ ಏನಿದ್ದರೂ ದೇಶವನ್ನು ರಕ್ಷಿಸಬೇಕು. ನಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕು ಎಂಬುದಷ್ಟೇ ಆಗಿತ್ತು. ಆ ಮಟ್ಟದಲ್ಲಿ ಸೈನ್ಯದ ಹಿರಿಯ ಅಧಿಕಾರಿಗಳು ನಮಗೆ ತರಬೇತಿ ನೀಡಿದ್ದರು ಎಂದು ಯುದ್ಧದ ದಿನಗಳನ್ನು ಮೆಲುಕು ಹಾಕಿದರು.
ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ಸೈನಿಕರು ಮಡಿದರು. ಪ್ರತಿಕೂಲ ವಾತಾವರಣವುಳ್ಳ ಬೆಟ್ಟಗಳಲ್ಲಿ ಕಾರ್ಗಿಲ್ ಯುದ್ಧ ಮಾಡಲಾಯಿತು. ಅದರಲ್ಲೂ ಪಾಕಿಸ್ತಾನ ಸೈನಿಕರು ಬೆಟ್ಟದ ಮೇಲಿದ್ದರೆ, ನಮ್ಮವರೆಲ್ಲರೂ ಕೆಳಗಿದ್ದರು. ಬೆಟ್ಟದ ಮೇಲೆ ತೆರಳಿ ಎದುರಾಳಿಗಳನ್ನು ಹೊಡೆದುರುಳಿಸಿದ ದೇಶಕ್ಕೆ ಜಯ ತಂದುಕೊಟ್ಟ ಸೈನಿಕರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಸೈನ್ಯದಲ್ಲಿ 17 ವರ್ಷ ಸೇವೆ ಸಲ್ಲಿಸಿದ ಬಳಿಕ ನಿವೃತ್ತಿಯಾಗಿದ್ದೇನೆ ಎಂದವರು ಸ್ಮರಿಸಿದರು.
ಆಗಲೂ ಪುಲ್ವಾಮಾ ಮಾದರಿ ದಾಳಿ: ಇತ್ತೀಚೆಗೆ ಪುಲ್ವಾಮಾದಲ್ಲಿ ಸೈನಿಕರಿದ್ದ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿ ಮಾದರಿಯಲ್ಲಿ ಕಾರ್ಗಿಲ್ ಯುದ್ಧಕ್ಕೂ ಮುನ್ನವೂ ನಡೆದಿತ್ತು. ಉದಂಪುರದಿಂದ ಬಾರಾಮುಲ್ಲಾಗೆ ಹೋಗುತ್ತಿದ್ದಾಗ ಉಗ್ರರು ರಸ್ತೆಯಲ್ಲಿ ಹೂತಿಟ್ಟಿದ್ದ ಬಾಂಬ್ ಸಿಡಿದು 32 ಸೈನಿಕರಿದ್ದ ಬಸ್‌ನ್ನು ಬ್ಲಾಸ್ಟ್ ಮಾಡಲಾಗಿತ್ತು. ಸೈನಿಕರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾದವು ಹೊರತು, ಯಾರೂ ಸಾಯಲಿಲ್ಲ. ಅದೇ ದಿನ ಮತ್ತೂಂದು ಸ್ಥಳದಲ್ಲಿ ಬಸ್ ಮೇಲೆ ಗುಂಡಿನ ದಾಳಿಯೂ ನಡೆಯಿತು. ನಂತರ ಅಲ್ಲಿಂದ ಬಾರಾಮುಲ್ಲಾಕ್ಕೆ ತೆರಳಲಾಯಿತು. ಅಲ್ಲಿ ಸೈನಿಕರೆಲ್ಲರೂ ಗುಂಪು ಸೇರಿದ್ದಾಗ ಉಗ್ರರು ರಾಕೆಟ್ ಲಾಂಚರ್ ಮೂಲಕ ದಾಳಿ ಮಾಡಿದರು. ಅದು ಸ್ವಲ್ಪ ದೂರ ಬಿದ್ದ ಹಿನ್ನೆಲೆಯಲ್ಲಿ ಕೇವಲ ಒಬ್ಬ ಸೈನಿಕ ಮಾತ್ರ ಮೃತಪಟ್ಟರು ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಎದುರಾದ ಘಟನೆಗಳ ಬಗ್ಗೆ ವಿವರಿಸಿದರು.