ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 20ನೇ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮವನ್ನು ರಾಷ್ಟ್ರದೇವೋಭವ ಎಂಬ ಹೆಸರಿನಲ್ಲಿ ಗುರುವಾರ ಆಚರಿಸಲಾಯಿತು.
ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯ ಐದನೇ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ರಾಷ್ಟ್ರದೇವೋಭವ ಕಾರ್ಯಕ್ರಮವನ್ನು ಬಿಐಟಿಎಂ ಕಾಲೇಜು ನಿರ್ದೇಶಕ ಡಾ| ಯಶ್ವಂತ ಭೂಪಾಲ್ ಉದ್ಘಾಟಿಸಿ, ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೀರಶೈವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ ಮಾತನಾಡಿ, ವೀರಯೋಧರಿಗೆ ಗೌರವಿಸುವುದು ಹೆಮ್ಮೆಯ ವಿಚಾರ. ಎಲ್ಲರಿಗೂ ಕಾರ್ಗಿಲ್ ವಿಜಯ್‌ದಿವಸ್ ಶುಭಕೋರಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕೆ.ಎಸ್.ಅಶೋಕ್, ರಾಜ್ಯ ಯುವಮೋರ್ಚಾ ಉಪಾಧ್ಯಕ್ಷೆ ನಿಶ್ಚಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿರಾವ್, ಪ್ರಧಾನ ಕಾರ್ಯದರ್ಶಿ ಜಿ.ಕೆ.ರಾಮಕೃಷ್ಣ, ಬಿಜೆಪಿ ಮುಖಂಡ ವೇಮಣ್ಣ, ಮಾಜಿ ಯೋಧರ ಹಾಗೂ ವೀರ ನಾರಿಯರ ಸಂಘದ ಉಪಾಧ್ಯಕ್ಷ ಪ್ರಸನ್ನಕುಮಾರ್ ಗೌಡ, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ವಿನೋದ್, ಕಾರ್ಯದರ್ಶಿ ಬಿ.ಎಂ.ಸಿದ್ದೇಶ್, ಪದಾಕಾರಿಗಳಾದ ರಘು ಹರ್ದಗೇರಿ, ನವೀನ್ ಸೌದ್ರಿ, ಸೌದ್ರಿ ಕಾರ್ತಿಕ್, ಅಮರ್, ಬಾಲು, ರಾಕೇಶ್ ಉಪಸ್ಥಿತರಿದ್ದರು.
ಬಳಿಕ ನಡೆದ ಸನ್ಮಾನ ಸಮಾರಂಭದಲ್ಲಿ ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯ ಪ್ರತಿಷ್ಠಿತ ಜನಕ (ಜನರ ನಡುವಿನ ಕಣ್ಮಣಿ) ಪ್ರಶಸ್ತಿಯನ್ನು ಎಂಬಿಎಸ್‌ಎಲ್ ಶಾಲೆಯ ನಿವೃತ್ತ ದೈಹಿಕ ಶಿಕ್ಷಕ (ಗ್ರೇಡ್-1) ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಅಥ್ಲೆಟಿಕ್ ಜಿ.ಸತ್ಯನಾರಾಯಣರಾವ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ನಂತರ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.ಎನ್.ಇಂದ್ರಕುಮಾರ್ ಮತ್ತು ತಂಡದಿಂದ ನಡೆದ ಸುಗಮ ಸಂಗೀತ ಹಾಗೂ ಕೆ.ಸಿ.ಸುಂಕಣ್ಣ ಮತ್ತು ತಂಡದಿಂದ ದೇಶಭಕ್ತಿ ಸಮೂಹ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಕಾರ್ಯಕ್ರಮ ನಿಮಿತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಮಾಜಿ ಯೋಧರಾದ ನಾಯಕ್ ಚೆನ್ನಾರೆಡ್ಡಿ, ನಾಗರಾಜ್, ಸುಬೇದಾರ್ ನಾರಾಯಣ ಕೆ.ಎಲ್., ಕೆ.ಸತ್ಯನಾರಾಯಣ, ಮಧುಸೂಧನ, ಸಿ.ಪ್ರಭಾಕರ್, ಗಣೇಶ್, ಸಿಎಫ್‌ಎನ್ ಶ್ರೀನಿವಾಸ, ಸುಬೇದಾರ್ ಪಂಪಾಪತಿ, ಸಾಜೆಂಟ್ ವೇಣುಗೋಪಾಲ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.