Advertisement

ಜಿಲ್ಲೆಗೆ 833 ಕೋಟಿ ರೂ. ಅನುದಾನ

03:58 PM Sep 18, 2019 | Team Udayavani |

ಬಳ್ಳಾರಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದ್ದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ 2013-14ನೇ ಸಾಲಿನಿಂದ 2019-20 ಸಾಲಿನವರೆಗೆ ಬಳ್ಳಾರಿ ಜಿಲ್ಲೆಗೆ ಒಟ್ಟು ರೂ. 832.82 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಒಟ್ಟು 3255 ಕಾಮಗಾರಿಗಳನ್ನು ಕೈಗೆತ್ತಿಕೊಂಡು 2104 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ರೂ. 422.68 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜಿಲ್ಲೆಯ ಅಭ್ಯರ್ಥಿಗಳಿಗೆ 371(ಜೆ) ಅರ್ಹತಾ ಪ್ರಮಾಣ ಪತ್ರಗಳನ್ನು ಸಹ ವಿತರಿಸಲಾಗಿದೆ. ಜಿಲ್ಲೆಯಿಂದ ವಿವಿಧ ಇಲಾಖೆಯಲ್ಲಿ ವಿವಿಧ ವೃಂದಗಳಲ್ಲಿ 371 (ಜೆ) ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿ ಉದ್ಯೋಗ ಪಡೆದಿದ್ದಾರೆ. ಹೈದ್ರಾಬಾದ್‌ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ಕಾಯ್ದೆಯಡಿ ರಾಜ್ಯ ಸರ್ಕಾರವು ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯನ್ನು ರಚಿಸಿದೆ. ಅದರಡಿ ಈ ಭಾಗದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೆ ಆರೋಗ್ಯ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಅವರು ವಿವರಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಬರ ನಿರ್ವಹಣೆ ಸಂಬಂಧ ಜಿಲ್ಲಾಡಳಿತ ವತಿಯಿಂದ ನಗರ ಪ್ರದೇಶದಲ್ಲಿ ಎಸ್‌ಎಫ್‌ಸಿ ನಿಯಡಿ 2018-19ನೇ ಮತ್ತು 2019-20ನೇ ಸಾಲಿನಲ್ಲಿ ರೂ.701.49 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಒಟ್ಟು 295 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಈವರೆಗೆ ರೂ. 224.60 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಾರದಂತೆ ಜಿಲ್ಲೆಯಲ್ಲಿ ಒಟ್ಟು 13 ಮೇವು ಬ್ಯಾಂಕ್‌ ಮತ್ತು 9 ಗೋಶಾಲೆಗಳನ್ನು ತೆರೆದು ಮೇವನ್ನು ಜಾನುವಾರುಗಳಿಗೆ ವಿತರಣೆ ಮಾಡಲಾಗುತ್ತಿದೆ. ಒಟ್ಟು 8683 ರೈತರುಗಳಿಗೆ 34694 ಮೇವಿನ ಕಿರು ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಈವರೆಗೆ ಎಸ್‌ಡಿಆರ್‌ಎಫ್‌ನಿಧಿಯಿಂದ ಕುಡಿಯುವ ನೀರಿಗೆ ಮತ್ತು ಮೇವು ವಿತರಣೆಗೆ ಒಟ್ಟು ರೂ. 7 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯುವ ನಿಟ್ಟಿನಲ್ಲಿ ಪಣತೊಡಬೇಕಾಗಿದೆ ಎಂದರು.

Advertisement

ರಜಾಕರ ಹಿಂಸೆ ಬಿಚ್ಚಿಟ್ಟ ಸವದಿ: ಬ್ರಿಟಿಷರ ಕುಮ್ಮಕ್ಕಿನಿಂದ ಹೈದರಾಬಾದ್‌ ಪ್ರಾಂತ್ಯವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರು, ಭಾರತಕ್ಕೆ ಅಧಿಕೃತವಾಗಿ ಸ್ವಾತಂತ್ರ್ಯ ಬಂದರೂ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದರು. ರಜಾಕರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ನಿಜಾಮರ ಆಡಳಿತ ಪ್ರದೇಶವನ್ನು ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರ ದಿಟ್ಟತನದಿಂದ ಕೈಗೊಂಡ ಪೊಲೀಸ್‌ ಕಾರ್ಯಾಚರಣೆಯಲ್ಲಿ ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ, 1948 ಸೆಪ್ಟೆಂಬರ್‌ 17ರಂದು ಈ ಭಾಗಗಳು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ದೇಶಕ್ಕೆ 1947ರ ಆಗಸ್ಟ್‌ 15ಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್‌ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಪ್ರತ್ಯೇಕ ರಾಷ್ಟಕಟ್ಟಲು ಮುಂದಾಗಿದ್ದ ಹೈದ್ರಾಬಾದ್‌ ನಿಜಾಮರು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ನಡೆಸಲು ಪ್ರಯತ್ನಿಸಿದ್ದರು. ಮೀರ್‌ಉಸ್ಮನ್‌ ಅಲಿಖಾನ್‌ ಅಂದಿನ ಕೊನೆಯ ನಿಜಾಮನಾಗಿದ್ದನು. ಈ ಮಧ್ಯೆ ಸಂಸ್ಥಾನದಲ್ಲಿ ಸಾಮ್ರಾಜ್ಯ ಶಾಹಿ ಆಡಳಿತ ನಡೆದು ಪ್ರಜೆಗಳಿಗೆ ಹಿಂಸಿಸಲಾಗುತ್ತಿತ್ತು. ದಂಗೆಕೋರರು ಪ್ರಜೆಗಳ ಸುಲಿಗೆ ನಡೆಸುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ಜನರ ಪಾಲಿಗೆ ಇರಲಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ಷೋಭೆ ಉಂಟಾಯಿತು. ಕಲಬುರಗಿ ಆರ್ಯ ಸಮಾಜ ಚಳುವಳಿ ಹಾಗೂ ಮತ್ತಿತರ ಸಂಸ್ಥೆಗಳು ಹೋರಾಟಕ್ಕೆ ಇಳಿದವು. ತುಂಗಭದ್ರಾ ನದಿ ಪ್ರದೇಶದ ಬಳ್ಳಾರಿ ಜಿಲ್ಲೆಯ ಗ್ರಾಮಗಳು ದಂಗೆ ಕೋರರಿಂದ ಹಿಂಸೆಗೊಳಗಾದವರಿಗೆ ರಕ್ಷಣೆ ಸಹಾಯ ಹಸ್ತ ನೀಡಿದ್ದವು. ಇವರೆಲ್ಲರನ್ನೂ ನಾವಿಂದೂ ಸ್ಮರಿಸಬೇಕಾಗಿದೆ ಎಂದರು.

ಹೈಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿರಿಗೆರೆ ಪೊನ್ನರಾಜ್‌ ವಿಶೇಷ ಉಪನ್ಯಾಸ ನೀಡಿದರು. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವ ಈ. ತುಕಾರಾಂ, ಜಿಪಂ ಅಧ್ಯಕ್ಷೆ ಸಿ. ಭಾರತಿ ತಿಮ್ಮಾರೆಡ್ಡಿ, ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್, ಜಿಪಂ ಸಿಇಒ ಕೆ. ನಿತೀಶ್‌, ಎಸ್ಪಿ ಸಿ.ಕೆ.ಬಾಬಾ ಸೇರಿದಂತೆ ಅನೇಕರು ಇದ್ದರು. ವಿನೋದ್‌ ಚವಾಣ್‌ ನಿರೂಪಿಸಿದರು. ಈಶ್ವರ್‌ ಕಾಂಡೂ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next